ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಎಲ್ಲಾ ಅಭ್ಯರ್ಥಿಗಳು ಕೊನೆಗಳಿಗೆಯ ಕಸರತ್ತು ಶುರು ಮಾಡಿದ್ದಾರೆ.
ಪಾಲಿಕೆ ಚುನಾವಣೆಯನ್ನು ಗೆಲ್ಲಲೇ ಬೇಕು ಎಂದು ಪಣ ತೊಟ್ಟಿರುವ ಅಭ್ಯರ್ಥಿಗಳು ಕೊನೆಗಳಿಗೆಯಲ್ಲೂ ತಮ್ಮ ಕಸರತ್ತು ಮಾಡುತ್ತಿದ್ದು, ಮತದಾರರ ಒಲೈಕೆಗೆ ಹೊಸ ದಾಳ ಉರುಳಿಸುತ್ತಿದ್ದಾರೆ. ಈ ನಡುವೆ ಮುಂದೆ ನಿಂತು ಬಿರುಸಿನ ಪ್ರಚಾರ ಮಾಡುವ ಕಾರ್ಯಕರ್ತರಿಗೆ ಬೇರೆ ಪಕ್ಷದವರು ಕರೆ ಮಾಡಿ ಬೆದರಿಕೆ ಹಾಕಿ, ಪ್ರಚಾರದಲ್ಲಿ ಹೆಚ್ಚು ಕಾಣಿಸಿಕೊಂಡರೆ ಸರಿ ಇರುವುದಿಲ್ಲ ಎಂದು ಧಮ್ಕಿ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ನಮ್ಮ ಕಾರ್ಯಕರ್ತರಿಗೆ ಕರೆ ಮಾಡಿ ಬಿಜೆಪಿಗೆ ಸಪೋರ್ಟ್ ಮಾಡಬೇಡ, ಮಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ ಅಂತ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾದವ್ ಆರೋಪಿಸಿದ್ದಾರೆ. ಅಲ್ಲದೆ ಮುಂದೆ ನಿಂತು ಕೆಲಸ ಮಾಡುವವರನ್ನು ಟಾರ್ಗೆಟ್ ಮಾಡಿ ಕರೆ ಮಾಡುವುದು, ಬೇರೆಯವರಿಂದ ಧಮ್ಕಿ ಹಾಕಿಸುವುದು ಮಾಡುತ್ತಿದ್ದಾರೆ. ಈ ಬಗ್ಗೆ ಡಿಸಿ ಹಾಗೂ ಎಸ್ಪಿಯವರಿಗೆ ಮಾಹಿತಿ ನೀಡಿದ್ದೇನೆ ಎಂದು ಜಾದವ್ ತಿಳಿಸಿದ್ದಾರೆ.
ಈ ಬಗ್ಗೆ ಶಾಸಕ ರವೀಂದ್ರನಾಥ್ ಹಾಗು ಸಂಸದ ಜಿ.ಎಂ ಸಿದ್ದೇಶ್ವರ್ ಮಾತನಾಡಿ, ದಾವಣಗೆರೆಯಲ್ಲಿ ಮೊದಲಿನಿಂದಲೂ ಈ ರೀತಿ ಧಮ್ಕಿ ಹಾಕುವುದು ನಡೆಯುತ್ತಿರುತ್ತದೆ. ಅವರು ಬೆದರಿಕೆಗೆ ನಾವು ಬಗ್ಗುವುದಿಲ್ಲ ಎಂದರು.
ಎಸ್ಪಿ ಹನುಮಂತರಾಯ ಪ್ರತಿಕ್ರಿಯಿಸಿ, ಎಲ್ಲರೂ ಚುನಾವಣೆ ಪ್ರಕ್ರಿಯೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಕಾರ್ಯಕರ್ತರಿಗೆ, ಮತದಾರರಲ್ಲಿ ಆತಂಕ ಸೃಷ್ಟಿಸುವುದು, ಅನನುಕೂಲ ಮಾಡುವುದು ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲವನ್ನೂ ಗಮನಿಸುತ್ತಿದ್ದು ದೂರುಗಳ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟರು.