ದಾವಣಗೆರೆ: ತುಂಗಾಭದ್ರಾ ನದಿ ನೀರಿನಿಂದ ಜಗಳೂರಿನ 53 ಕೆರೆಗಳು ಭರ್ತಿಯಾಗಲಿವೆ. ಆದರೆ ಕಾಮಗಾರಿಯ ಪೈಪ್‌ಲೈನ್ ಸಾಗುವ ಮಾರ್ಗದಲ್ಲಿ ಯೋಜನೆಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾಸಗಿ ಆಸ್ತಿ ಮಾಲೀಕರಿಗೆ ಸೂಕ್ತ ಪರಿಹಾರ ಹಾಗು ಮಾಹಿತಿ ನೀಡದೆ ಜಮೀನುಗಳಲ್ಲಿ ಪೈಪ್ ಹಾಕುತ್ತಿರುವುದು ರೈತರ ಆತಂಕಕ್ಕೆ ಕಾರಣ. ಹಾಗಾಗಿ, ಕಕ್ಕರಗೊಳ್ಳ ರೈತರು, ಸಾರ್ವಜನಿಕರು ಪರಿಹಾರಕ್ಕಾಗಿ ಹೋರಾಟದ ಹಾದಿ ತುಳಿದಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಬರದ ನಾಡು ಎಂದು ಕರೆಸಿಕೊಂಡಿರುವ ಜಗಳೂರು ತಾಲೂಕಿನ 53 ಕೆರೆಗಳಿಗೆ ನೀರುಣಿಸುವ 'ದೀಟೂರು ಏತ ಯೋಜನೆ' ಇನ್ನೇನು ಮುಗಿಯುವ ಹಂತದಲ್ಲಿದೆ. ಹರಿಹರ ತಾಲೂಕು ದೀಟೂರು ಪಂಪ್ ಹೌಸ್ನಿಂದ ಜಗಳೂರು ತಾಲೂಕಿನ 53 ಕೆರೆಗಳಿಗೆ ನೀರುಣಿಸುವ ಯೋಜನೆ ಇದಾಗಿದ್ದು, ಬಹುತೇಕ ಕಾಮಗಾರಿ ಮುಗಿದಿದೆ. ಆದರೆ ಈ ನೀರಾವರಿ ಯೋಜನೆ ಸಾಗುವ ಪೈಪ್‌ಲೈನ್ ಮಾರ್ಗದಲ್ಲಿ ರೈತರಿಗೆ ಸೂಕ್ತ ನ್ಯಾಯ ಒದಗಿಸಿಲ್ಲ ಎಂಬ ಅಸಮಾಧಾನ ಕೇಳಿ ಬಂದಿದೆ.
ಕಕ್ಕರಗೊಳ್ಳ ಗ್ರಾಮದಲ್ಲಿ ಪೈಪ್‌ಲೈನ್ ಸಾಗುವ ಮಾರ್ಗದಲ್ಲಿ ಅಲ್ಲಿನ ರೈತರನ್ನು ನಿರ್ಲಕ್ಷಿಸಿ ಕಾಮಗಾರಿ ನಡೆಸಲಾಗುತ್ತಿದೆ. ನೀರಾವರಿ ಇಲಾಖೆಯ ಇಂಜಿನಿಯರ್ಗಳು ರೈತರು ಹಾಗು ಖಾಸಗಿ ಆಸ್ತಿ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾಮಗಾರಿ ನಡೆಸುತ್ತಿದ್ದಾರೆ. ಸೂಕ್ತ ಪರಿಹಾರ ನೀಡದೆ ರೈತರ ಜಮೀನಿನಲ್ಲಿ ಪೈಪ್ ಲೈನ್ ಮಾಡಿದ್ದಾರೆ. ಇದರಿಂದ ರೈತರ ಬೆಳೆಗಳಿಗೆ ಹಾನಿಯಾಗಿದೆ. ಜತೆಗೆ, ಕೃಷಿ ಭೂಮಿ ಹಾಳಾಗಿದೆ. ಕೆಲವು ಖಾಸಗಿ ವ್ಯಕ್ತಿಗಳ ನಿವೇಶನ ಒತ್ತುವರಿಯಾಗಿದೆ. ಸರ್ಕಾರಿ ಕಾಮಗಾರಿ ಎಂದು ರೈತರ ಬಾಯಿ ಮುಚ್ಚಿಸಿ ಸರ್ವಾಧಿಕಾರ ಚಲಾಯಿಸಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ರೈತರಿಗೆ ಅನುಕೂಲವಾಗುವ ದೀರ್ಘಾವಧಿ ಯೋಜನೆಯಾಗಿದ್ದು, ಗುಣಮಟ್ಟದ ಕಾಮಗಾರಿ ನಡೆಯಬೇಕು. ಆದ್ರೆ, ಕಾಮಗಾರಿ ಡಿಪಿಆರ್ ಮೂಲಸ್ವರೂಪಕ್ಕೆ ಬದಲಾಗಿ ನಡೆಯುತ್ತಿದೆ. ರೈತರಿಗೆ ಯಾವುದೇ ನೋಟಿಸ್ ನೀಡದೆ, ಕಂದಾಯ ಅಧಿಕಾರಿಗಳು, ಪಿಡಿಓಗಳ ಗಮನಕ್ಕೆ ಬಾರದೆ ಇಂಜಿನಿಯರ್ಗಳು ಮನಸೋ ಇಚ್ಛೆ ಕಾಮಗಾರಿ ನಡೆಸುತ್ತಿದ್ದಾರೆ. ಇದರಿಂದ ರೈತ ವರ್ಗ ಜಮೀನು ಕಳೆದುಕೊಳ್ಳುವ ಆತಂಕದಲ್ಲಿದೆ.
ಕಕ್ಕರಗೊಳ್ಳದಲ್ಲಿ ನೀರಾವರಿ ಕಾಮಗಾರಿ ಸ್ಮಶಾನಕ್ಕೆ ಕುತ್ತು ತರುತ್ತಿದೆ. ಇಡೀ ಕಾಮಗಾರಿಗೆ 660 ಕೋಟಿ ಮೀಸಲಿಟ್ಟಿದ್ದು, ಅಧಿಕಾರಿ ವರ್ಗಕ್ಕೆ ಬೆಳೆ ಪರಿಹಾರ, ಜಮೀನು ಭೂಸ್ವಾಧೀನದ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲ. ಕಾಮಗಾರಿ ಮುಗಿದ ನಂತರ ಅದರ ನಿರ್ವಹಣೆ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಕೇಳಿದ್ರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಭಾರಿ ನೀರಾವರಿ ಯೋಜನೆಯಲ್ಲಿ ಕೆಲ ರೈತರಿಗೆ ಅವರಿಗೆ ತಕ್ಕಷ್ಟು ಪರಿಹಾರ ಸಿಕ್ಕಿದೆ. ಇಲಾಖೆ ಅಧಿಕಾರಿಗಳು ರೈತರಿಗೆ ಕೊಡುವ ಪರಿಹಾರದಲ್ಲಿ ತಾರತಮ್ಯ ಮಾಡುತ್ತಿದ್ದು ಈ ಇಬ್ಬಗೆ ನೀತಿ ಬೇಡ ಎಂಬುದು ರೈತರ ಆಗ್ರಹವಾಗಿದೆ.
ಇದನ್ನೂ ಓದಿ: ತುರ್ತು ಕೇಬಲ್ ದುರಸ್ತಿ ಕಾಮಗಾರಿ: ರಾಷ್ಟ್ರೀಯ ಹೆದ್ದಾರಿ ಪೀಣ್ಯ ಮೇಲ್ಸೇತು ಮೇಲೆ ವಾಹನ ಸಂಚಾರ ನಿರ್ಬಂಧ