ದಾವಣಗೆರೆ : ಜಿಲ್ಲೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಂಸದ ಜಿ ಎಂ ಸಿದ್ದೇಶ್ವರ್ ಅವರು ಇನ್ನೂ ಮೂರು ತಿಂಗಳಲ್ಲಿ ಎಥೆನಾಲ್ ಪ್ಲಾಂಟ್‌ಗೆ ಭೂಮಿ ಪೂಜೆ ನೆರವೇರಿಸುವ ಭರವಸೆ ಕೊಟ್ಟಿದ್ದಾರೆ.
ಹನಗವಾಡಿ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 2ಜಿ ಬಯೋ ಎಥೆನಾಲ್ ಪ್ಲಾಂಟ್ ಆರಂಭಕ್ಕೆ ಬೇಕಾದ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗ್ತಿದೆ. ಈ ಸಂಬಂಧ ಎಂಆರ್ ಪಿ ಎಲ್ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಸರ್ಕಾರಿ ಅಧಿಕಾರಿಗಳ ಜೊತೆ ಸಂಸದರು ಸಭೆ ನಡೆಸಿದ್ದಾರೆ. ಈ ಯೋಜನೆಗೆ ಭೂಮಿ ನೀಡಿರುವ 27 ಕುಟುಂಬದ ತಲಾ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಏನಿದು ಬಯೋ ಎಥೆನಾಲ್...?
- ಪೆಟ್ರೋಲ್ ಬದಲು ಸಸ್ಯರಾಶಿಯನ್ನು ಬಳಸಿಕೊಂಡು ಇಂಧನ ಉತ್ಪಾದನೆ ಮಾಡುವುದು.
- ಡೀಸೆಲ್ ಬದಲಿಗೆ ಸಸ್ಯರಾಶಿಯಿಂದ ಉತ್ಪಾದಿಸುವ ಇಂಧನ ಬಯೋಡೀಸೆಲ್
- ನೇರವಾಗಿ ಕಬ್ಬು, ಮೆಕ್ಕೆಜೋಳ, ತರಕಾರಿ ಇನ್ನಿತರ ಸಸ್ಯಗಳನ್ನು ಬಳಸುವುದನ್ನು ಫಸ್ಟ್ ಜನರೇಶನ್ (1 ಜಿ) ಎನ್ನಲಾಗುತ್ತದೆ
- ಕೃಷಿ ಉತ್ಪನ್ನಗಳನ್ನು ಬಿಟ್ಟು ಅದರ ತ್ಯಾಜ್ಯವನ್ನಷ್ಟೇ ಬಳಸಿಕೊಂಡು ಇಂಧನ ಉತ್ಪಾದನೆ ಮಾಡುವುದು ಸೆಕೆಂಡ್ ಜನರೇಷನ್ (2ಜಿ) ಎನ್ನಲಾಗುತ್ತೆ
- ಹರಿಹರದ ಹನಗವಾಡಿಯಲ್ಲಿ ಮೆಕ್ಕೆಜೋಳದ ಗಂಟು, ಬೆಂಡು, ಹತ್ತಿಕಡ್ಡಿ, ಭತ್ತದ ಹುಲ್ಲು, ಕೆಂಗಿನ ಸಿಪ್ಪೆ, ಕಬ್ಬಿನ ಸಿಪ್ಪೆ ಇದಕ್ಕೆ ಬಳಕೆಯಾಗಲಿದೆ
ಹನಗವಾಡಿಯಲ್ಲಿ 47.65 ಎಕರೆ ಭೂಮಿ ಒದಗಿಸಿ ಎರಡು ವರ್ಷವಾಯ್ತು. ಡಿಗ್ಗಿಂಗ್ ಆರಂಭಿಸಿ ಒಂದು ವರ್ಷವಾಗಿದೆ. ಎಥೆನಾಲ್ ಘಟಕ ಆರಂಭಕ್ಕೆ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿದ್ದೇಶ್ವರ್ ಸೂಚನೆ ನೀಡಿದ್ದಾರೆ.
ದೇಶದಲ್ಲಿ 12 ಕಡೆ ಬಯೋಎಥೆನಾಲ್ ಘಟಕ ತೆರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈಗ ಪೆಟ್ರೋಲಿಯಂಗೆ ಸಂಬಂಧಿಸಿದಂತೆ 80 ರಷ್ಟು ಆಮದು ಮಾಡಿಕೊಳ್ಳಲಾಗ್ತಿದೆ. 2022 ರ ಹೊತ್ತಿಗೆ ಶೇಕಡಾ 70ಕ್ಕೆ ಇಳಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಇನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಘಟಕ ಆರಂಭಗೊಂಡ ಬಳಿಕ ಕೊಳಚೆ ನೀರು ಎಲ್ಲಿ ಬಿಡುತ್ತೀರಿ, ಘನತ್ಯಾಜ್ಯ ಏನು ಮಾಡುವಿರಿ ಎಂದು ಪ್ರಶ್ನಿಸಿದರು.
ಒಟ್ಟಿನಲ್ಲಿ ಈ ಯೋಜನೆಯಡಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ಕೂಗು ಎದ್ದಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿದ್ದೇಶ್ವರ್, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ.