ದಾವಣಗೆರೆ: ಬೆಣ್ಣೆನಗರಿಯ ಆಟೋ ಚಾಲಕನೊಬ್ಬ (ಆಟೋರಾಜ) ತನಗೆ ಮಗಳು ಜನಿಸಿದ್ದಾಳೆಂದು ಆರು ವರ್ಷಗಳ ಹಿಂದೆ ಮಗಳ ನೆನಪಿಗಾಗಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದ್ದ. ಆದರೆ, ದಾವಣಗೆರೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗಮಿಸುತ್ತಿದ್ದಾರೆಂದು ನಗರ ಸುಂದರವಾಗಿ ಕಾಣಬೇಕೆಂಬ ಉದ್ದೇಶದಿಂದ ಅಧಿಕಾರಿಗಳು ಡಿವೈಡರ್‌ನಲ್ಲಿ ಬೆಳೆದಿದ್ದ ಮರಗಳನ್ನು ನಾಶಪಡಿಸಿ, ಆ ಪರಿಸರ ಪ್ರೇಮಿಯ ಮನಸ್ಸು ಘಾಸಿಗೊಳಿಸಿದ್ದಾರೆ.
ದಾವಣಗೆರೆಯ ಯಲ್ಲಮ್ಮ ನಗರದ ಮುಂಭಾಗದಿಂದ ಹಾದು ಹೋಗಿರುವ ರಿಂಗ್ ರಸ್ತೆಯ ಡಿವೈಡರ್‌ನಲ್ಲಿ ಬೆಳೆದಿದ್ದ ಐದಾರು ವರ್ಷಗಳ ಪುಟ್ಟ ಮರಗಳು ನೆಲಸಮವಾಗಿವೆ. ಯಲಮ್ಮ ನಗರದ ನಿವಾಸಿ ಚಮನ್ ಸಾಬ್ ಎಂಬ ಆಟೋಚಾಲಕ ಈ ಮರಗಳನ್ನು ಬೆಳೆಸಿದ್ದ. ಸುಮಾರು 100ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಹಾಕಿ ತಮ್ಮ ಮಕ್ಕಳಂತೆ ಪೋಷಿಸಿದ್ದ.
ಆರು ವರ್ಷಗಳಿಂದ ಬೆಳೆಸಿದ್ದ ಗಿಡಗಳು ಮರಗಳಾಗಿದ್ದವು. ಆದರೆ, ಕಳೆದೆರಡು ದಿನಗಳ ಹಿಂದೆ ಸಿಎಂ ಯಡಿಯೂರಪ್ಪ ಆಗಮಿಸುತ್ತಿದ್ದಾರೆ ಎಂದು ತಿಳಿದ ಅಧಿಕಾರಿಗಳು ನಗರ ಸ್ವಚ್ಛತೆಗಾಗಿ, ಕಸದ ಜೊತೆಗೆ ಜೆಸಿಬಿ ಮೂಲಕ ಸುಮಾರು 100 ಮರಗಳಲ್ಲಿ 40ಕ್ಕೂ ಹೆಚ್ಚು ಪುಟ್ಟ ಮರಗಳನ್ನು ಬೆಳಗಿನ ಜಾವ ನೆಲಸಮ ಮಾಡಿದ್ದಾರೆ. ಬೆಳಿಗ್ಗೆ ಇದನ್ನು ಗಮನಿಸಿದ ಚಮನ್ ಸಾಬ್ ಅವರು ಪಾಲಿಕೆ ಪೌರಕಾರ್ಮಿಕರನ್ನು ವಿಚಾರಿಸಿದಾಗ ಈ ವಿಚಾರ ಗೊತ್ತಾಗಿದೆ.
ಇನ್ನು ಕೆಲ ಮರಗಳನ್ನು ಜೆಸಿಬಿ ಮೂಲಕ ಕೀಳುತ್ತಿದ್ದನ್ನು ಚಮನ್ ಸಾಬ್ ಪ್ರಶ್ನಿಸಿದ್ದಕ್ಕೆ ಅಧಿಕಾರಿಗಳು ಹಾರಿಕೆ ಉತ್ತರ ಕೊಟ್ಟಿದ್ದಾರಂತೆ. ಇದರಿಂದ ಕಂಗಲಾದ ಅವರು, ಪೋಷಿಸಿದ ಮರಗಳು ನೆಲಸಮಗೊಂಡಾಗಿನಿಂದ (ಮೂರು ದಿನಗಳ ಕಾಲ) ಅನ್ನ-ನೀರು ಬಿಟ್ಟಿದ್ದರು. ಇದು ಕುಟುಂಬದವರನ್ನು ಹೈರಾಣಾಗಿಸಿತ್ತು.
ಚಮನ್ ಸಾಬ್, ಆರು ವರ್ಷಗಳ ಹಿಂದೆ ಆಟೋ ಓಡಿಸಿ ಕೆಲಸ ಮುಗಿದ ಬಳಿಕ ಗಿಡಗಳಿಗೆ ನೀರು ಹೊತ್ತು ಹಾಕಿ ಬೆಳೆಸಿದ್ದನ್ನು ನೆನಸಿ ಗದ್ಗದಿತರಾದರು. ಮರಗಳನ್ನು ಹಾಕಿಕೊಡುವ ತನಕ ನಾನು ಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಇದಕ್ಕೆ ಧ್ವನಿಗೂಡಿಸಿರುವ ಪರಿಸರ ಸಂರಕ್ಷಣಾ ವೇದಿಕೆ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ದಾವಣಗೆರೆ ಸ್ಮಾರ್ಟ್‌ಸಿಟಿ ಎಂದು ತೋರಿಸಿಕೊಳ್ಳಲು ಸ್ಮಾರ್ಟ್ ಸಿಟಿ ಹಾಗೂ ಪಾಲಿಕೆಯ ಅಧಿಕಾರಿಗಳು ಸ್ವಚ್ಛತೆ ಹೆಸರಲ್ಲಿ ಪುಟ್ಟ ಮರಗಳನ್ನು ಬಲಿ ಪಡೆದಿದ್ದಾರೆ ಎಂದು ಆರೋಪಿಸಿದರು. ತಕ್ಷಣ ಎಷ್ಟು ಮರಗಳನ್ನು ನಾಶಗೊಳಿಸಿದ್ದಾರೋ ಅಷ್ಟೇ ಮರಗಳನ್ನು ತಂದು ನೆಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಇಡೀ ರಾತ್ರಿ ಮರಗಳಿಗೆ ನೀರುಣಿಸುತ್ತಾ ಪೋಷಿಸುತ್ತಿದ್ದನ್ನು ಗಮನಿಸಿದ್ದ ಅಂದಿನ ಜಿಲ್ಲಾಧಿಕಾರಿ ಅಂಜನ್ ಕುಮಾರ್, ಚಮನ್ ಸಾಬ್ ಅವರ ಪರಿಸರ ಪ್ರೇಮ ಕಂಡು ಸಹಾಯ ಬೇಕೆಂದರೆ ಕೇಳಿ ಎಂದಿದ್ದರಂತೆ. ಆದರೆ, ಇಂದು ಪಾಲಿಕೆ ಅಧಿಕಾರಿಗಳು ಜೀವ ಉಳಿಸುವ ಮರಗಳ ಜೀವವನ್ನೇ ಕಿತ್ತುಕೊಂಡಿದ್ದಾರೆ. ಇದರಿಂದ ಪರಿಸರ ಪ್ರೇಮಿಗಳು ಅಧಿಕಾರಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ.