ದಾವಣಗೆರೆ: ನಾನು ಮೂರು ವರ್ಷ ಹೇಗೆ ಆಡಳಿತ ನಡೆಸಬೇಕೆಂಬ ಸಲಹೆ ಕೊಡಿ. ಆ ಬಳಿಕ ನನ್ನಿಂದ ಇದು ಸಾಧ್ಯವಾಗದಿದ್ದರೆ ನಾಳೆಯೇ ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ತಮ್ಮ ಸಮುದಾಯದ ಮೂವರು ಶಾಸಕರಿಗೆ ಮಂತ್ರಗಿರಿ ನೀಡಲೇಬೇಕು ಎಂದು ಒತ್ತಡ ಹಾಕಿದ್ದ ವೀರಶೈವ ಲಿಂಗಾಯತ ಪಂಚಮಶಾಲಿ ಮಠದ ಪೀಠಾಧ್ಯಕ್ಷರ ವಿರುದ್ಧ ಬಿಎಸ್ವೈ ಸಿಡಿಮಿಡಿಗೊಂಡರು.
ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಮಾತನಾಡಿದ ಅವರು, ನಿಮ್ಮ ಸಲಹೆ ನೀಡಿದಂತೆ ಕೆಲಸ ಮಾಡುತ್ತೇನೆ. ನನ್ನ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಿ. ಮೂರು ವರ್ಷಗಳ ಕಾಲ ಹೇಗೆ ಆಡಳಿತ ನಡೆಸಬೇಕೆಂಬ ಬಗ್ಗೆ ಎಲ್ಲಾ ಸಮಾಜದ ಸ್ವಾಮೀಜಿಗಳು ಸಲಹೆ ನೀಡಲಿ. ನನ್ನ ಮೇಲೆ ಒತ್ತಡ ಹಾಕಿದರೆ ಹೇಗೆ.? ಬನ್ನಿ ಕುಳಿತುಕೊಂಡು ಮಾತುಕತೆ ನಡೆಸೋಣ. ಆಮೇಲೆ ಒಂದು ತೀರ್ಮಾನಕ್ಕೆ ಬರೋಣ ಎಂದು ಹೇಳಿದರು.
ನೀವು ಹೇಳಿದ ಹಾಗೆ ತಲೆ ಬಾಗಿ ನಡೆಯುತ್ತೇನೆ. ಪಂಚಮಸಾಲಿ ಸಮಾಜ ಇಲ್ಲದೇ ನಾನಿಲ್ಲ. ನನ್ನ ಪರಿಸ್ಥಿತಿ ಎಲ್ಲರೂ ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದ ಯಡಿಯೂರಪ್ಪ, ನಾನು ಪಂಚಮಸಾಲಿ ಸಮಾಜದ ಪರವೇ ಇದ್ದೇನೆ ಎಂದು ಹೇಳಿದರು.
12 ಜನ ರಾಜೀನಾಮೆ ಕೊಟ್ಟು 4 ತಿಂಗಳು ವನವಾಸ ಅನುಭವಿಸಿದ್ದಾರೆ. ಅವರು ಬರದಿದ್ದರೆ ನಾನು ಮುಖ್ಯಮಂತ್ರಿ ಆಗ್ತಿರಲಿಲ್ಲ. ಅವರ ತ್ಯಾಗದಿಂದ, ಪಂಚಮಸಾಲಿ ಸಮಾಜದ ಆಶೀರ್ವಾದ ದಿಂದ ಸಿಎಂ ಆಗಿ ಕುಳಿತಿದ್ದೇನೆ. ಮೂರು ವರ್ಷ ಅಧಿಕಾರ ಮಾಡಬೇಕೆಂಬ ಅಭಿಪ್ರಾಯ ಕೊಡಿ. ದಯವಿಟ್ಟು ಬೇರೆ ರೀತಿಯಲ್ಲಿ ಮಾತನಾಡಬೇಡಿ ಎಂದು ಮನವಿ ಮಾಡಿದರು.