ದಾವಣಗೆರೆ: ಕೊರೊನಾ ಅಟ್ಟಹಾಸಕ್ಕೆ ಸಿಲುಕಿ ಮಕ್ಕಳ ಭವಿಷ್ಯವೂ ಕಮರುತ್ತಿದೆ. ಬಹುತೇಕ ಗ್ರಾಮೀಣ ಭಾಗದ ಶಾಲಾ ಮಕ್ಕಳು ಕೃಷಿ ಕೆಲಸದಲ್ಲಿ ನಿರತರಾಗಿದ್ದಾರೆ. ಶಾಲೆಗಳು ಬಂದ್ ಆಗಿರುವ ಜೊತೆಗೆ ವಿದ್ಯಾಗಮ ಯೋಜನೆ ಕೂಡ ನಿಂತಿದ್ದು ಮಕ್ಕಳು ಅನಿವಾರ್ಯವಾಗಿ ಕೂಲಿ ಕೆಲಸದಲ್ಲಿ ತೊಡಗಿದ್ದಾರೆ.
ದಾವಣಗೆರೆ ತಾಲೂಕಿನ ಬೇತೂರು ಗ್ರಾಮ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಶೇ. 70ರಷ್ಟು ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೂಲಿ ಕೆಲಸಕ್ಕೆ ತೆರಳಿ ಹಣ ಸಂಪಾದಿಸುವ ಮೂಲಕ ತಮ್ಮ ಪೋಷಕರಿಗೆ ನೆರವಾಗುತ್ತಿದ್ದಾರೆ. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಕೂಲಿ ಕೆಲಸಕ್ಕೆ ಹೋದರೆ ಮನೆಯ ಆರ್ಥಿಕ ಪರಿಸ್ಥಿತಿ ಕೊಂಚ ಸುಧಾರಿಸಬಹುದು ಎಂಬ ಕಾರಣಕ್ಕೆ ಕೆಲಸಕ್ಕೆ ಹೋಗುತ್ತಿದ್ದೇವೆ. ತರಗತಿಗಳು ಪ್ರಾರಂಭವಾದ ಬಳಿಕ ಮತ್ತೆ ಶಾಲೆಗಳಿಗೆ ಮರಳುತ್ತೇವೆ ಎನ್ನುತ್ತಾರೆ ವಿದ್ಯಾರ್ಥಿಗಳು.
ನಗರದ ಪ್ರದೇಶದ ಮಕ್ಕಳು ಆನ್ಲೈನ್ ಕ್ಲಾಸ್ ಕೇಳುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದ ಬಹುತೇಕ ಮಕ್ಕಳಿಗೆ ಆನ್ಲೈನ್ ಪಾಠ ಕೇಳಲು ಸ್ಮಾರ್ಟ್ ಫೋನ್ ಹಾಗೂ ನೆಟ್ವರ್ಕ್ ಸಮಸ್ಯೆ ಇದೆ. ಆದ್ದರಿಂದ ಬಿತ್ತನೆ ಕಾರ್ಯ, ಗೊಬ್ಬರ ಹಾಕುವುದು, ಟೊಮ್ಯಾಟೊ ಹಣ್ಣು ಕೀಳುವುದು ಸೇರಿದಂತೆ ವಿವಿಧ ಕೃಷಿ ಕೆಲಸಗಳಲ್ಲಿ ತೊಡಗಿದ್ದಾರೆ.
ಒಟ್ಟಾರೆ, ಲಾಕ್ಡೌನ್ನಿಂದಾಗಿ ಕೂಲಿಯನ್ನೇ ನಂಬಿ ಬದುಕುತ್ತಿದ್ದವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ, ಗ್ರಾಮೀಣ ಭಾಗದ ಮಕ್ಕಳು ತಂದೆ-ತಾಯಿಗೆ ನೆರವಾಗುವ ದೃಷ್ಟಿಯಿಂದ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ.
ಇದನ್ನೂ ಓದಿ: 12th ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ CBSE ಮಾನದಂಡ ಪ್ರಕಟ: ಜುಲೈ 31ರೊಳಗೆ ರಿಸಲ್ಟ್