ದಾವಣಗೆರೆ : ಹಿಜಾಬ್ ತೆಗೆಯದೇ ಪರೀಕ್ಷೆಯೂ ಬರೆಯದೇ ವಿದ್ಯಾರ್ಥಿನಿಯರು ಮನೆಗೆ ತೆರಳಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
ಹಿಜಾಬ್ ತೆಗೆಯುವುದಿಲ್ಲ ಎಂದು ಹೇಳಿ ಹೋದ 16 ವಿದ್ಯಾರ್ಥಿನಿಯರ ಪೈಕಿ, 6 ವಿದ್ಯಾರ್ಥಿನಿಯರು ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ (ಪ್ರಿಪರೇಟರಿ) ಬರೆಯದೇ ಮನೆಗೆ ತೆರಳಿದ್ರು. ಶಾಲೆಯ ಶಿಕ್ಷಕರು ಮನವೊಲಿಸಿದರೂ ಕೂಡ ಕೇಳದ ವಿದ್ಯಾರ್ಥಿನಿಯರು ಮನೆಯತ್ತ ಹೆಜ್ಜೆ ಹಾಕಿದರು.
ಶಾಲೆಯಲ್ಲಿ ಹಿಜಾಬ್ ತೆಗೆಯುವುದಿಲ್ಲವೆಂದು ಪಟ್ಟು ಹಿಡಿದ 9 ಮತ್ತು 10ನೇ ತರಗತಿಯ ಒಟ್ಟು 16 ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ. ಹಿಜಾಬ್ ತೆಗೆಯದಂತೆ ನಮ್ಮ ಮನೆಯಲ್ಲಿ ಹೇಳಿದ್ದಾರೆ ಎಂದು ಹೇಳಿ ಹೋದರು. ಒಟ್ಟು 26 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಆಗಮಿಸಿದ್ದರು. ಅದರಲ್ಲಿ ಹಿಜಾಬ್ ತೆಗೆದು ಕೆಲವರು ತರಗತಿಗೆ ಹಾಜರಾಗಿದ್ದಾರೆ.
ಇದನ್ನೂ ಓದಿ: 'ಹಿಜಾಬ್ ತೆಗಿಸಬೇಡಿ'.. ಶಾಲಾ ಸಿಬ್ಬಂದಿ ಜೊತೆಗೆ ಸಾಮಾಜಿಕ ಹೋರಾಟಗಾರ್ತಿ ವಾಗ್ವಾದ
ಮತ್ತೊಂದು ಘಟನೆ : ಸರ್ಕಾರದ ಆದೇಶ ಹಾಗೂ ಹೈಕೋರ್ಟ್ ಮಧ್ಯಂತರ ಆದೇಶದ ನಡುವೆಯೂ ಕೆಲ ವಿದ್ಯಾರ್ಥಿನಿಯರು ಇಂದು ಹಿಜಾಬ್ ಧರಿಸಿ ಹರಿಹರ ನಗರದ ಡಿಆರ್‌ಎಂ ಪ್ರೌಢ ಶಾಲೆಯ ತರಗತಿಯಲ್ಲಿ ಕುಳಿತಿದ್ದರು. ಇದನ್ನು ಗಮನಿಸಿದ ಮುಖ್ಯೋಪಾಧ್ಯಾಯರು ತರಗತಿಗೆ ತೆರಳಿ ಹಿಜಾಬ್ ತೆಗೆದಿಡುವಂತೆ ಆದೇಶದ ಕುರಿತು ತಿಳುವಳಿಕೆ ನೀಡಿದರು. ಆದರೂ ಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರು ಒಪ್ಪಿಲ್ಲ.
ಶಾಲೆಯಲ್ಲಿ ಇರುವ ಒಟ್ಟು 399 ವಿದ್ಯಾರ್ಥಿಗಳ ಪೈಕಿ 305 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿರುವ ಶಾಲೆಯಾಗಿದ್ದರಿಂದ ಹಿಜಾಬ್ ಇಲ್ಲದೇ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹಿಂದೇಟು ಹಾಕಿದರು. ಹಿಜಾಬ್ ತೆಗೆಯುವಂತೆ ಒತ್ತಡ ಹೇರಿದ್ದರಿಂದ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪರೀಕ್ಷೆ ಹಾಲ್ ಬಿಟ್ಟು ಮನೆಗೆ ತೆರಳಿದರು.