ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಪುರಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಬಹುಮತ ಪಡೆಯುವುದರ ಮೂಲಕ ಆಡಳಿತದ ಚುಕ್ಕಾಣಿ ಹಿಡಿದಿದೆ.
23 ಸದಸ್ಯರ ಸಂಖ್ಯಾಬಲ ಹೊಂದಿದ್ದ ಮಲೆಬೆನ್ನೂರು ಪುರಸಭೆಯಲ್ಲಿ ಕಾಂಗ್ರೆಸ್ 12 ಸ್ಥಾನ, ಬಿಜೆಪಿ 7, ಜೆಡಿಎಸ್ 3, ಪಕ್ಷೇತರ 1 ಸ್ಥಾನಗಳನ್ನು ಗೆದ್ದುಕೊಂಡಿದೆ. 9 ಮತ್ತು 15ನೇ ವಾರ್ಡ್ನಲ್ಲಿ ಅವಿರೋಧ ಆಯ್ಕೆ ಮಾಡಲಾಗಿದೆ. 9ನೇ ವಾರ್ಡ್‌ನಿಂದ ಶಿವಣ್ಣ (ಕಾಂಗ್ರೆಸ್) ಅವಿರೋಧ ಆಯ್ಕೆಯಾಗಿದ್ದರೆ, 15ನೇ ವಾರ್ಡ್‌ನಿಂದ ನಿಗಿನಾ ಬಾನು (ಕಾಂಗ್ರೆಸ್) ಅವಿರೋಧ ಆಯ್ಕೆಯಾದರು.
ಕಾಂಗ್ರೆಸ್ ಜಯಭೇರಿ ಬಾರಿಸಿದ ಬೆನ್ನಲ್ಲೇ ಕೈ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು. ಬಿಜೆಪಿಗೆ ಭಾರಿ ಮುಖಭಂಗವಾಗಿದೆ.
ಕಳೆದ ಬಾರಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಆಡಳಿತ:
ಮಲೆಬೆನ್ನೂರು ಪುರಸಭೆಯಲ್ಲಿ ಕಳೆದ ಬಾರಿ ಬಿಜೆಪಿ 7, ಕಾಂಗ್ರೆಸ್ 8, ಜೆಡಿಎಸ್ 5, ಪಕ್ಷೇತರರು 3 ಮಂದಿ ಗೆಲುವು ದಾಖಲಿಸಿದ್ದರು. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಆಡಳಿತ ನಡೆಸಿದ್ದವು. ಆದ್ರೆ ಈ ಸಲ ಬಿಜೆಪಿ ಎರಡನೇ ಸ್ಥಾನ ಹಾಗು ಜೆಡಿಎಸ್ ಮೂರನೇ ಸ್ಥಾನ ಪಡೆಯಿತು.
ಕೇವಲ 7 ಮತ ಪಡೆದ ಕಾಂಗ್ರೆಸ್ ಅಭ್ಯರ್ಥಿ
18ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿಯೋರ್ವ ಕೇವಲ 7 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡರು. ಒಟ್ಟು 683 ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಮಂಜುನಾಥ್ 422 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ 242 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಕೇವಲ 7 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡರು.
ಇದನ್ನೂ ಓದಿ: 11 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ: ಸ್ವಕ್ಷೇತ್ರದಲ್ಲಿಯೇ ಸಚಿವ ಶ್ರೀರಾಮುಲುಗೆ ಮುಖಭಂಗ