ದಾವಣಗೆರೆ: ಮುಸ್ಲಿಂ ಸಮುದಾಯ ಹಾಗೂ ಮಸೀದಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ. ಪಿ. ರೇಣುಕಾಚಾರ್ಯ ವಿರುದ್ಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.
ಹೊನ್ನಾಳಿಯ ಜಾಮೀಯ ಮಸೀದಿ ಅಧ್ಯಕ್ಷ ಹಬೀಬುಲ್ಲಾ ಸಾಬ್ ಅವರು ರೇಣುಕಾಚಾರ್ಯರ ವಿರುದ್ಧ ನೀಡಿದ್ದ ದೂರು ಆಧರಿಸಿ ಈ ಎಫ್ಐಆರ್ ದಾಖಲಿಲಾಗಿದೆ. ಕಳೆದ 10 ದಿನಗಳ ಹಿಂದೆ ಹೊನ್ನಾಳಿ ಪಟ್ಟಣದಲ್ಲಿ ನಡೆದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಪರ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಕೆಟ್ಟದಾಗಿ ರೇಣುಕಾಚಾರ್ಯ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರಿನ ಸಾರಾಂಶ:
ಇಸ್ಲಾಂ ಧರ್ಮದ ಮಸೀದಿಗಳನ್ನು ಅವಮಾನ ಮಾಡುವಂಥ, ಇತರ ಧರ್ಮದವರನ್ನು ಮುಸ್ಲಿಂ ಧರ್ಮದವರ ವಿರುದ್ಧ ಎತ್ತಿ ಕಟ್ಟುವಂಥ, ಕೋಮು ಸಂಘರ್ಷ ಹುಟ್ಟುಹಾಕುವಂಥ ಹೇಳಿಕೆ ನೀಡಿ ಸಂವಿಧಾನದ ವಿರುದ್ಧ ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಮುಸ್ಲಿಂರ ಶ್ರದ್ಧಾ ಕೇಂದ್ರದ ಮೇಲೆ ದಾಳಿ ಮಾಡಲು ಪ್ರೇರೇಪಿಸುವಂತಹ ಕೋಮು ಪ್ರಚೋದಕ ಹೇಳಿಕೆ ನೀಡಿರುವ ಶಾಸಕ ರೇಣುಕಾಚಾರ್ಯರ ವಿರುದ್ಧ ಭಾರತೀಯ ದಂಡ ಸಂಹಿತೆ ರೀತ್ಯಾ ಪ್ರಕರಣವನ್ನು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.