ದಾವಣಗೆರೆ: ಶಾಮನೂರು ಶಿವಶಂಕರಪ್ಪನವರು ಸ್ಪರ್ಧಿಸುವ ಕ್ಷೇತ್ರಕ್ಕೆ ಸಿ.ಎಂ. ಇಬ್ರಾಹಿಂ ಸ್ಪರ್ಧೆ ಮಾಡ್ಬೇಕು ಎಂಬ ವಿಚಾರ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಅಲ್ಲಿ ಅಲ್ಪ ಸಂಖ್ಯಾತರು ಬಹು ಸಂಖ್ಯೆಯಲ್ಲಿದ್ದು, ಅವರ ಮತಗಳೇ ನಿರ್ಣಾಯಕವಾಗಿವೆ. ಇದರಿಂದ ಶಾಮನೂರು ಶಿವಶಂಕರಪ್ಪನವರಿಗೆ ಸಿ. ಎಂ. ಇಬ್ರಾಹಿಂ ಬಿಸಿ ತುಪ್ಪ ಆಗಲಿದ್ದಾರಾ? ಎಂಬ ಪ್ರಶ್ನೆ ಮೂಡಿದೆ.
ಹೌದು, ಕಾಂಗ್ರೆಸ್ ಭದ್ರಕೋಟೆ ಮೇಲೆ ದಳಪತಿಗಳು ಕಣ್ಣಿಟ್ಟಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಬರುತ್ತಾರೆಂಬ ಸುದ್ದಿ ಕೇಳಿ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರ ಅಂದ್ರೆ ಶಾಮನೂರು ಅವರ ಕ್ಷೇತ್ರ, ಜೊತೆಗೆ ಕಾಂಗ್ರೆಸ್ ಭದ್ರಕೋಟೆ ಕೂಡ ಹೌದು. ಈ ಹಿನ್ನೆಲೆ ಶಾಮನೂರು ಶಿವಶಂಕರಪ್ಪನವರನ್ನ ಸೋಲಿಸುವ ಶಕ್ತಿ ಹುಟ್ಟಿಲ್ಲ ಎಂಬುದು ಕೈ ಕಾರ್ಯಕರ್ತರ ಅಭಿಪ್ರಾಯ.
ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಮುಸ್ಲಿಂ ಸಮಾಜದವರಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಈ ಹಿಂದೆ ಕೇಳಿ ಬಂದಿತ್ತು. ಆದ್ರೆ, ಕಾಂಗ್ರೆಸ್ ಪಕ್ಷ ಶಾಮನೂರು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿಲ್ಲ. ಈ ಸಲ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ರಾಜಕಾರಣದಲ್ಲಿ ವಾಗ್ಮಿ ಎಂದೇ ಹೆಸರಾದ ಸಿಎಂ ಇಬ್ರಾಹಿಂ ದಕ್ಷಿಣ ಕ್ಷೇತ್ರಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮೊನ್ನೆ ಹರಿಹರದಲ್ಲಿ ನಡೆದ ಜೆಡಿಎಸ್ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ನೇರವಾಗಿ ಸಿ.ಎಂ. ಇಬ್ರಾಹಿಂ ಹಾಗೂ ಕುಮಾರಸ್ವಾಮಿ ಸಮ್ಮುಖದಲ್ಲಿ ಹರಿಹರದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಈ ವಿಚಾರವನ್ನ ಸ್ಪಷ್ಟ ಪಡಿಸಿದ್ರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಿ.ಎಂ. ಇಬ್ರಾಹಿಂ ಸ್ಪರ್ಧಿಸಬೇಕು. ಅಲ್ಲಿ ಅಲ್ಪ ಸಂಖ್ಯಾತರ ಮತಗಳು ಹೆಚ್ಚಾಗಿವೆ. ಇದರಿಂದ ದಾವಣಗೆರೆ ಜಿಲ್ಲೆಯಲ್ಲಿ ಐದು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಬಹುದು ಎಂದರು. ನಂತರ ಮಾತಾಡಿದ ಸಿ.ಎಂ. ಇಬ್ರಾಹಿಂ, ಈ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡಲಿಲ್ಲ. ನಿರಾಕರಣೆ ಸಹ ಮಾಡಲಿಲ್ಲ. ಹೀಗಾಗಿ, ಅಲ್ಪ ಸಂಖ್ಯಾತರ ವೋಟ್ ಬ್ಯಾಂಕ್ ನಂಬಿ ರಾಜಕಾರಣ ಮಾಡುವ ಶಾಮನೂರ್ಗೆ ಸಂಕಷ್ಟ ಶುರುವಾಗಿದೆ.
ಜಿಲ್ಲೆಯ ಬಹುತೇಕ ಕಡೆ 'ಜನತಾ ಜಲಧಾರೆ' ಕಾರ್ಯಕ್ರಮ ಶುರುವಾಗಿದೆ. ಈ ಜಲಧಾರೆಯಲ್ಲಿ ಸಿ.ಎಂ. ಇಬ್ರಾಹಿಂ ಸ್ಪರ್ಧೆ ಬಗ್ಗೆ ಚರ್ಚೆಗಳೂ ಪ್ರಾರಂಭವಾಗಿವೆ. ಇನ್ನೊಂದು ವಿಚಾರ ಅಂದ್ರೆ, ಬಿಜೆಪಿಯ ಎಸ್ ಎ. ರವೀಂದ್ರನಾಥ ಶಾಸಕರಾಗಿರುವ ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಸಿ.ಎಂ. ಬಸವರಾಜ ಬೊಮ್ಮಾಯಿ ಬರುತ್ತಾರೆ ಎಂಬ ಸುದ್ದಿಯೂ ಇತ್ತೀಚಿಗೆ ಕೇಳಿ ಬರುತ್ತಿದೆ. ಈ ಸಂಗತಿ ಕೇಳಿ ಇದೇ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಮನೂರು ಪುತ್ರ ಎಸ್.ಎಸ್ ಮಲ್ಲಿಕಾರ್ಜುನಗೆ ಸಂಕಷ್ಟ ಶುರುವಾಗಿದ್ರೆ, ಇತ್ತಾ ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪಗೆ ಸಿ.ಎಂ. ಇಬ್ರಾಹಿಂ ಬಿಸಿ ತುಪ್ಪವಾಗಲಿದ್ದಾರೆ. ಕಳೆದ 25 ವರ್ಷಗಳಿಂದ ಬಡವರಿಗೆ ಶಾಮನೂರ್ರಿಂದ ಅನ್ಯಾಯ ಆಗಿದೆ. ಬದಲಾವಣೆ ಬರಬೇಕು ಎಂದು ಜೆಡಿಎಸ್ ಮುಖಂಡರು ಎನ್ನುತ್ತಿದ್ದಾರೆ.
ಇದನ್ನೂ ಓದಿ: ರಾಜಕಾರಣದಲ್ಲಿ ದಿನಗಣನೆ ಮಾಡಲು ಆಗುವುದಿಲ್ಲ: ಸಿಎಂ ಬೊಮ್ಮಾಯಿ