ದಾವಣಗೆರೆ: ಕಾಂಗ್ರೆಸ್ ಮುಖಂಡರು ರಾಜ್ಯಪಾಲರಿಗೆ ನೀಡಿರುವ ದೂರು ಅತ್ಯಂತ ದೊಡ್ಡ ಹಾಸ್ಯಾಸ್ಪದ ವಿಷಯ ಎಂದು ಪರ್ಸಂಟೇಜ್ ವಿಚಾರಕ್ಕೆ ಸಂಬಂಧಿಸಿ ದಾವಣಗೆರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
ನಗರದಲ್ಲಿ ಮಾತನಾಡಿದ ಸಿಎಂ, ಕಾಂಗ್ರೆಸ್ ನಾಯಕರೇ ಪರ್ಸಂಟೇಜ್ ಜನಕರು, ಆ ಪರ್ಸೆಂಟ್ ಜಾಸ್ತಿಯಾಗಿದ್ದರೆ ಅದು ಕಾಂಗ್ರೆಸ್ ಕಾಲದಲ್ಲಿ. ಉಗ್ರಪ್ಪ-ಸಲೀಂ ಪರ್ಸಂಟೇಜ್ ಬಗ್ಗೆ ಮಾತನಾಡಿದ ವಿಡಿಯೋ ಪ್ರಚಾರ ಆಗಿದ್ದು ಎಲ್ಲರಿಗೂ ಗೊತ್ತಿದೆ. ರಾಜ್ಯಪಾಲರಿಗೆ ಕೊಟ್ಟಿರುವ ಪತ್ರದಲ್ಲೇ ಸ್ಪಷ್ಟತೆ ಇಲ್ಲ. ಯಾವ ಕಾಲದಲ್ಲಿ ಭ್ರಷ್ಟಾಚಾರ ಆಗಿದೆ ಎಂಬ ಮಾಹಿತಿಯಿಲ್ಲ. ಕಾಂಗ್ರೆಸ್ ಅವಧಿಯ ಟೆಂಡರ್‌ಗಳನ್ನು ತನಿಖೆ ಮಾಡಿಸುತ್ತೇವೆ ಎಂದರು.
ACB Raid: ಎಸಿಬಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಇದರಿಂದ ಭ್ರಷ್ಟರ ಬಂಡವಾಳ ಬಯಲಾಗಿದ್ದು, ವ್ಯವಸ್ಥೆ ಶುದ್ಧೀಕರಣ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ಹಾಗಾಗಿ ಎಸಿಬಿ ದಾಳಿ ನಡೆಯುತ್ತಿವೆ ಎಂದರು.
ಲಖನ್ ಜಾರಕಿಹೊಳಿ ನಾಮಪತ್ರ ಹಿಂಪಡೆಯುತ್ತಾರಾ?
ಲಖನ್ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿದ್ದೇನೆ. ಮಹಾಂತೇಶ ಕೌಟಗಿಮಠ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿದ್ದು, ಅವರಿಗೆ ಸಂಪೂರ್ಣ ಬೆಂಬಲ ಸಿಗಬೇಕು ಎಂದಿದ್ದೇನೆ. ಅವರು ಇಂದು ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸುತ್ತಾರೆ. ಈ ಬಗ್ಗೆ ರಮೇಶ್ ಜಾರಕಿಹೊಳಿ ಜೊತೆಯೂ ಮಾತನಾಡಿದ್ದೇನೆ ಎಂದರು.
ಜೆಡಿಎಸ್ ಜೊತೆ ಹೊಂದಾಣಿಕೆ?
ಈ ಬಗ್ಗೆ ಈಗಾಗಲೇ ಉತ್ತರ ಕೊಟ್ಟಿದ್ದೇವೆ. ಬಿಎಸ್ವೈ ಕೂಡ ಬೆಂಬಲ ಪಡೆಯುತ್ತೇವೆ ಎಂದು ಮಾತ್ರ ಹೇಳಿದ್ದಾರೆ. ಪಕ್ಷದಲ್ಲಿ ಆ ಬಗ್ಗೆ ತೀರ್ಮಾನ ಆಗಿಲ್ಲ. 40 ವರ್ಷ ಅನುಭವದ ಮಾತನ್ನು ಬಿಎಸ್ವೈ ಹೇಳಿದ್ದಾರೆ. ನಾನು ಕೂಡ ಮಾತನಾಡಿದ್ದೇನೆ. ಆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಇದನ್ನೂ ಓದಿ: Watch.. ಧಾರವಾಡದಲ್ಲಿ ಪಾಲಿಕೆ ಗುತ್ತಿಗೆದಾರನ ಮೇಲೆ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ