ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ದಾನ, ಧರ್ಮಕ್ಕೆ ಹೆಸರುವಾಸಿಯಾದ ಜಿಲ್ಲೆ. ಇಲ್ಲಿ ಅನೇಕ ಧರ್ಮಪ್ರಕಾಶಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಸಾಲಿನಲ್ಲಿ ಅರಳೆಯ ಅರಸ ( ಕಿಂಗ್ ಆಫ್ ಕಾಟನ್) ಎಂದು ಖ್ಯಾತಿ ಗಳಿಸಿದ್ದ ಧರ್ಮ ಪ್ರಕಾಶ ಚಿಗಟೇರಿ ಮುರಿಗೆಪ್ಪನವರು 1921 ರಲ್ಲಿ ನಿರ್ಮಾಣ ಮಾಡಿದ್ದ ಚಿಗಟೇರಿ ಬಂಗಲೆಗೆ ನೂರು ವರ್ಷ ತುಂಬಿದ್ದು, ಇಂದಿಗೂಈ ಮನೆ ನಳನಳಿಸುತ್ತಿದೆ.
ದಾವಣಗೆರೆ ಜಿಲ್ಲೆ ಅಂದಿನ ಚಿತ್ರದುರ್ಗ ಜಿಲ್ಲೆಯ ಭಾಗವಾಗಿದ್ದ ಕಾಲ, ಅ ಕಾಲದಲ್ಲಿ ಹರಪನಹಳ್ಳಿ ತಾಲೂಕಿನ ಚಿಗಟೇರಿ ಎಂಬ ಪುಟ್ಟಹಳ್ಳಿಯಿಂದ ದಾವಣಗೆರೆಗೆ ಆಗಮಿಸಿ, ಕಾಟನ್ ಕಾರ್ಖಾನೆ ತೆರೆದು ಇಡೀ ದಾವಣಗೆರೆ ಜಿಲ್ಲೆಗೆ ಕಾಟನ್ ಸಿಟಿ ಎಂದು ಹೆಸರು ದಕ್ಕಿಸಿಕೊಟ್ಟ ಕೀರ್ತಿ ಧರ್ಮ ಪ್ರಕಾಶ ಚಿಗಟೇರಿ ಮುರಿಗೆಪ್ಪ ಅವರಿಗೆ ಸಲ್ಲುತ್ತದೆ. ಅರಳೆ ಅರಸ (ಕಾಟನ್ ಕಿಂಗ್) ಎಂದೆಲ್ಲಾ ಕರೆಸಿಕೊಳ್ಳವ ಚಿಗಟೇರಿ ಮುರಿಗೆಪ್ಪನವರ 65 ವರ್ಷದ ಪುಣ್ಯ ಸ್ಮರಣೆ ನಿನ್ನೆ ನಡೆಯಿತು.
ಈ ಪುಣ್ಯ ಸ್ಮರಣೆಯೊಂದಿಗೆ ಅವರೇ ನಿರ್ಮಾಣ ಮಾಡಿದ್ದ ಭವ್ಯ ಚಿಗಟೇರಿ ಬಂಗಲೆಗೆ ಕೂಡ ನೂರು ವರ್ಷ ತುಂಬಿದ್ದು, ಇಂದಿಗೂ ಕೂಡ ಅ ಮನೆಯಲ್ಲೇ ಅವರ ಮೊಮ್ಮಕ್ಕಳು ವಾಸ ಮಾಡುತ್ತಿದ್ದಾರೆ. 1921 ರಲ್ಲಿ ನಿರ್ಮಾಣ ಮಾಡಿದ ಜಿ.ಚಿಗಟೇರಿ ಬಂಗಲೆಯನ್ನು ಇಂಡೋ ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.
ದಾವಣಗೆರೆಯ ಇಂದಿನ ಕೆ.ಆರ್ ರಸ್ತೆಯಲ್ಲಿರುವ ಈ ಮನೆ, ಇಂದಿಗೂ ಕೂಡ ನಳನಳಿಸುತ್ತಿದೆ. ವಿಶಾಲವಾದ ಒಂದೂವರೆ ಎಕರೆಯಲ್ಲಿ ನಿರ್ಮಾಣ ಮಾಡಿರುವ ಮನೆಯನ್ನು ಸಿಮೆಂಟ್, ಸರಳು ಇಲ್ಲದೇ ಕೇವಲ ಗಾರೆ, ಸುಣ್ಣ ಮಿಶ್ರಣ ಮಾಡಿ ಸುಟ್ಟ ಇಟ್ಟಿಗೆಯಲ್ಲಿ ನಿರ್ಮಿಸಲಾಗಿದೆ. ಇಂದಿಗೂ ಸುಸಜ್ಜಿತವಾದ ಸ್ಥಿತಿಯಲ್ಲಿರುವ ಈ ಚಿಗಟೇರಿ ಬಂಗಲೆಯಲ್ಲಿ ಎಂಟು ಬೆಡ್ ರೂಂ ಮತ್ತು ಇಟಾಲಿಯನ್ ಟೈಲ್ಸ್ ಅಳವಡಿಸಲಾಗಿದೆ.
1921 ರಲ್ಲಿ ವಿದ್ಯುತ್ ಇಲ್ಲದಿದ್ದರಿಂದ ಮುರಿಗೆಪ್ಪನವರು ಮನೆಯ ಹಿಂಭಾಗ ಡೈನಮೋ ನಿರ್ಮಿಸಿ, ಇಡೀ ಮನೆಗೆ ಅಂದಿನ ಕಾಲದಲ್ಲೇ ವಿದ್ಯುತ್ ತಂತಿಗಳು ಗೋಡೆಯ ಒಳಭಾಗದಲ್ಲಿರುವಂತೆ ನಿರ್ಮಾಣ ಮಾಡಿ, ಇಡೀ ಮನೆಗೆ ಬೆಳಕು ನೀಡಿದ್ದರು.
1917 ರಲ್ಲಿ ಮನೆ ನಿರ್ಮಾಣಕ್ಕೆ ಬುನಾದಿ ಹಾಕಲಾಗಿದ್ದು, 1921 ವಿಶ್ವ ಯುದ್ದದ ಸಮಯದಲ್ಲಿ ಮನೆ ಪೂರ್ಣಗೊಳಿಸಲಾಗಿದೆ. 1921 ರಲ್ಲಿ ತಮಿಳುನಾಡಿನ ಚೆಟ್ಟಿನಾಡ್ ಮೂಲದ ಗಾರೆ ಕೆಲಸದವರು ಈ ಭವ್ಯ ಬಂಗಲೆ ನಿರ್ಮಾಣ ಮಾಡಿರುವುದು ವಿಶೇಷ. ಬಂಗಲೆಯ ಹೊರ ಹಾಗು ಒಳ ನೋಟ ಆಕರ್ಷಣೀಯವಾಗಿದ್ದು, ದಾರಿಹೋಕರನ್ನು ತನ್ನತ್ತ ಸೆಳೆಯುತ್ತಿದೆ.