ದಾವಣಗೆರೆ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಕಾಲಿಕ ಮರಣ ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅವರು ಮೃತಪಟ್ಟು ಒಂದೂವರೆ ತಿಂಗಳು ಕಳೆದಿದ್ದು, ನೆಚ್ಚಿನ ನಟ ಹಾಕಿಕೊಟ್ಟ ಮಾರ್ಗದಲ್ಲಿ ಅಭಿಮಾನಿಗಳು ನಡೆಯುತ್ತಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನೆನಪು ಮಾತ್ರ. ನಮ್ಮೊಂದಿಗೆ ಇಲ್ಲದಿದ್ದರೂ ಕೂಡ ಅವರು ಮಾಡಿರುವ ಸಮಾಜಮುಖಿ ಕೆಲಸಗಳು ಎಂದಿಗೂ ಜೀವಂತವಾಗಿದೆ. ಅಪ್ಪು ಮರೆಯಾದ ಬಳಿಕ ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮದ ಅಭಿಮಾನಿಗಳು ಅವರ ನೆನಪನ್ನು ಅಜರಾಮರಗೊಳಿಸಲು ಕಪ್ಪು ಶಿಲೆಯ ಪ್ರತಿಮೆಯನ್ನು ನಿರ್ಮಿಸಿ ಉದ್ಘಾಟಿಸಿದ್ದಾರೆ.
ಉತ್ತರಪ್ರದೇಶ ಮೂಲದ ಶಿಲ್ಪಿ ವಿಪೀನ್ ಬಾದುರ್ಯಾ ಎಂಬುವರು ಇದನ್ನು ನಿರ್ಮಾಣ ಮಾಡಿದ್ದು, ಪುತ್ಥಳಿ ಅದ್ಭುತವಾಗಿ ಮೂಡಿಬಂದಿದೆ. ನಿನ್ನೆ ನಡೆದ 'ಅಪ್ಪು ಪ್ರತಿಮೆ ಅನಾವರಣ' ಕಾರ್ಯಕ್ರಮವನ್ನು ಮಹಾಂತ ರುದ್ರೇಶ್ವರ ಶ್ರೀ ನಡೆಸಿಕೊಟ್ಟರು. ಬಳಿಕ ಸಾಕಷ್ಟು ಜನ ರಕ್ತದಾನ ಮಾಡಿದ್ರು. ಜೊತೆಗೆ ಇಡೀ ಹೆಬ್ಬಾಳು ಗ್ರಾಮದ ಗ್ರಾಮಸ್ಥರು ನೇತ್ರದಾನ ಮಾಡಲು ಹೆಸರು ನೋಂದಣಿ ಮಾಡಿದರು.
ಈ ಪುತ್ಥಳಿಯನ್ನು ನಿರ್ಮಾಣ ಮಾಡಿಸಲು ಹೆಬ್ಬಾಳು ಗ್ರಾಮದ ಯುವಕರು ಸಾಕಷ್ಟು ಹರಸಾಹಸಪಟ್ಟು ಯುಪಿಯ ಶಿಲ್ಪಿ ವಿಪೀನ್ ಬಾದುರ್ಯಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಅಪ್ಪು ಪ್ರತಿಮೆ ನಿರ್ಮಿಸಲು ಕೇಳಿಕೊಂಡಾಗ ವಿಪೀನ್ ಹಿಂದೆ ಮುಂದೆ ನೋಡದೆ ಕೂಡಲೇ ಒಪ್ಪಿಕೊಂಡರು. ಬಳಿಕ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ ಆಗಮಿಸಿದ ವಿಪೀನ್, ಸಾಗರದಲ್ಲೇ ಈ ಮೂರ್ತಿಯನ್ನು ಸಿದ್ಧಪಡಿಸಿದ್ದಾರೆ. ಈ ಕಪ್ಪು ಶಿಲೆಯ ಅಪ್ಪು ಪುತ್ಥಳಿ ನಿರ್ಮಾಣ ಮಾಡಲು 90 ಸಾವಿರ ರೂ. ವೆಚ್ಚವಾಗಿದೆಯಂತೆ.
ಕರ್ನಾಟಕದಲ್ಲೇ ಈ ರೀತಿಯ ಕಪ್ಪು ಶಿಲೆಯ ಅಪ್ಪು ಪ್ರತಿಮೆ ನಿರ್ಮಾಣ ಮಾಡಿ, ಅನಾವರಣ ಮಾಡಿರುವುದು ದಾವಣಗೆರೆ ಜಿಲ್ಲೆಯಲ್ಲಿ ಮೊದಲ ಬಾರಿಯಾಗಿದ್ದು, ಇಡೀ ಹೆಬ್ಬಾಳು ಗ್ರಾಮವೇ ನೇತ್ರದಾನಕ್ಕೆ ಮುಂದಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.