ಬೆಂಗಳೂರು: ಕಳೆದೆರಡು ದಿನದಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ 'PayCM' ವಿಚಾರವಾಗಿ ಜಟಾಪಟಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿನ ಹಗರಣದ ಆರೋಪಗಳ ಕುರಿತ ‘ಸ್ಕ್ಯಾಮ್ ರಾಮಯ್ಯ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡುವ ಮೂಲಕ ಠಕ್ಕರ್ ನೀಡಿದೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿದ್ದರಾಮಯ್ಯ ಅಧಿಕಾರಾವಧಿಯ ಶೇ. 100 ಭ್ರಷ್ಟಾಚಾರವನ್ನು ಅನಾವರಣಗೊಳಿಸುವ ‘ಸ್ಕ್ಯಾಮ್ ರಾಮಯ್ಯ’ ಪುಸ್ತಕವನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಕಟೀಲ್, 'ಪೇ ಸಿಎಂ' ಎನ್ನುವುದು ಕಾಂಗ್ರೆಸ್ ಮೇಡಂಗೆ ಮಾಡುವ ಪೇಮೆಂಟ್ ಬಗ್ಗೆ ಉಲ್ಲೇಖ ಇದಾಗಿದೆ. ಶಿವಕುಮಾರ್ ಚೀಟಿ ನುಂಗಿದ್ದನ್ನು ನೋಡಿದ್ದೀರಿ. ಅವರು ಚೀಟಿ ಶಿವಕುಮಾರ್ ಆಗಿದ್ದಾರೆಂದು ಟಾಂಗ್ ನೀಡಿದರು.
ಸಿದ್ದರಾಮಯ್ಯ ಅವರು ಕೋರ್ಟಿನ ಆದೇಶದನ್ವಯ ಬಂಧನಕ್ಕೊಳಗಾಗಲಿದ್ದಾರೆ ಎಂದ ಅವರು, ದೇಶದ ಬಹು ಹಳೆಯದಾದ ಕಾಂಗ್ರೆಸ್ ಪಕ್ಷವು ಸುದೀರ್ಘ ಅವಧಿಯ ರಾಜಕಾರಣದಲ್ಲಿ ಭ್ರಷ್ಟಾಚಾರಕ್ಕೆ ಅತಿ ದೊಡ್ಡ ಕೊಡುಗೆ ಕೊಟ್ಟಿದೆ. ದೇಶದಲ್ಲಿ ಉಗ್ರವಾದ ಭಯೋತ್ಪಾದನೆಗೂ ಕಾಂಗ್ರೆಸ್ ಪಕ್ಷವೇ ಕಾರಣ. 1947ರಿಂದ 2014ವರೆಗೆ ಗರಿಷ್ಠ ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರಕ್ಕೆ ಬೃಹತ್ತಾದ ಕೊಡುಗೆ ನೀಡಿದೆ ಎಂದರು.
ಕಾಂಗ್ರೆಸ್‍ನ ರಾಷ್ಟ್ರೀಯ ನಾಯಕರು, ರಾಜ್ಯದ ನಾಯಕರು ಹಗರಣಗಳಲ್ಲಿ ಸಿಲುಕಿದ್ದಾರೆ. ತನಿಖೆಯ ಫಲಿತಾಂಶಗಳು ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಈಡುಮಾಡಿವೆ. ಜನರ ದಾರಿ ತಪ್ಪಿಸಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ. ಸಿದ್ದರಾಮಣ್ಣನ ಕಾಲಘಟ್ಟದಲ್ಲೂ ಅತಿಹೆಚ್ಚು ಹಗರಣಗಳು ನಡೆದಿದ್ದು, ಲೋಕಾಯುಕ್ತ ಶಕ್ತಿ ಕುಂದಿಸಿ ಹಗರಣಗಳನ್ನು ಮುಚ್ಚಿ ಹಾಕಲು ಆಗಿನ ಸರ್ಕಾರ ಮುಂದಾಗಿತ್ತು ಎಂದು ತಿಳಿಸಿದರು.
ಕಾಂಗ್ರೆಸ್‍ನ ಸಾಲು ಸಾಲು ಹಗರಣಗಳು: ನೆಹರೂರಿಂದ ಆರಂಭಿಸಿ ಮನಮೋಹನ್ ಸಿಂಗ್ ಕಾಲಘಟ್ಟದವರೆಗೆ ಈ ದೇಶದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಇತರ ಎಲ್ಲ ಪ್ರಧಾನಮಂತ್ರಿಗಳು ಭ್ರಷ್ಟಾಚಾರ ಮತ್ತು ವಿವಿಧ ಹಗರಣಗಳಲ್ಲಿ ಸಿಲುಕಿದವರೇ ಆಗಿದ್ದಾರೆ. 1948ರ ಜೀಪ್ ಹಗರಣದಿಂದ ಬೊಫೋರ್ಸ್, ಸಿಮೆಂಟ್ ಹಗರಣ, ಕಾಮನ್‍ವೆಲ್ತ್ ಹಗರಣದಿಂದ 2ಜಿ ಹಗರಣದವರೆಗೆ ಆಕಾಶ, ನೀರು, ಮಣ್ಣು ಮತ್ತು ಗಾಳಿಯಲ್ಲಿ ಗರಿಷ್ಠ ಹಗರಣಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಟೀಕಿಸಿದರು.
ಅನ್ವರ್ ಮಾಣಿಪ್ಪಾಡಿ ವರದಿ ₹2.5 ಲಕ್ಷ ಕೋಟಿ ಹಗರಣವನ್ನು ಬೆಳಕಿಗೆ ತರಲಿದೆ. ಅರ್ಕಾವತಿ, ಮೊಟ್ಟೆ, ಹಾಸಿಗೆ, ದಿಂಬು ಸೇರಿ ಅನೇಕ ಹಗರಣಗಳು ನಡೆದಿದ್ದವು. ಇವೆಲ್ಲವುಗಳನ್ನು ಮುಚ್ಚಿಡಲು ಕಾಂಗ್ರೆಸ್ ಪ್ರಯತ್ನಿಸಿತು. ಡ್ರಗ್ ದಂಧೆ, ಮರಳು ಮಾಫಿಯಾಗಳು ರಾಜ್ಯದ ಕಾಂಗ್ರೆಸ್ ಸರಕಾರವನ್ನು ನಡೆಸುತ್ತಿದ್ದವು. ಆ ದಂಧೆಗಳನ್ನು ನಮ್ಮ ಸರಕಾರ ನಿಯಂತ್ರಿಸಿದೆ ಎಂದು ವಿವರಿಸಿದರು.
ಕಾಂಗ್ರೆಸ್ ಹಗರಣಗಳ ಸಂಪೂರ್ಣ ತನಿಖೆ ಮತ್ತು ತಪ್ಪಿತಸ್ಥರ ಬಂಧನ ನಡೆಯಲಿದೆ. ನಮ್ಮ ಸಾಧನೆ ಮತ್ತು ಅಭಿವೃದ್ಧಿಗಳನ್ನು ನೋಡಿ ಆತಂಕಗೊಂಡ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ ಎಂದು ಅವರು ಆಕ್ಷೇಪಿಸಿದರು. ದಾಖಲೆಗಳನ್ನು ಸಂಗ್ರಹಿಸಿ ಸ್ಕ್ಯಾಮ್ ರಾಮಯ್ಯ ಪುಸ್ತಕ ಹೊರತಂದಿದ್ದೇವೆ ಎಂದರು.
ಅಧಿಕಾರಿಗಳಾದ ಕೆಂಪಯ್ಯ ಮತ್ತು ಕಾಂಟ್ರಾಕ್ಟರ್ ಕೆಂಪಣ್ಣನ ಮೂಲಕ ಸಿದ್ದರಾಮಣ್ಣ ರಾಜಕೀಯ ಮಾಡುತ್ತಿದ್ದಾರೆ. ಆದರೆ, ನಾವು ಲೋಕಾಯುಕ್ತಕ್ಕೆ ಜೀವ ಕೊಡುವ ಕೆಲಸ ನಾವು ಮಾಡಿದ್ದೇವೆ. ಕಾಂಗ್ರೆಸ್ ಆಡಳಿತ ಅವಧಿಯ ಎಲ್ಲ ಹಗರಣಗಳನ್ನು ತನಿಖೆ ಮಾಡಿಸಲಿದ್ದೇವೆ. ಪ್ರಕರಣ ದಾಖಲಿಸಿ ಎಷ್ಟೇ ದೊಡ್ಡವರಿದ್ದರೂ ಬಂಧಿಸಲಿದ್ದೇವೆ. ಪಾರದರ್ಶಕ ಆಡಳಿತ ನಡೆಸಲಿದ್ದೇವೆ ಎಂದು ನುಡಿದರು.
ಉಗ್ರವಾದ ಪೋಷಣೆ: ಉಗ್ರವಾದವನ್ನು ಪೋಷಿಸಿದ ಪಕ್ಷ ಕಾಂಗ್ರೆಸ್. ನಾವು ಉಗ್ರರನ್ನು ಮಟ್ಟ ಹಾಕಲು ಎನ್‍ಐಎ ಮೂಲಕ ದಾಳಿಗಳನ್ನು ಸಂಘಟಿಸಿದ್ದೇವೆ. ಇದಕ್ಕಾಗಿ ಕೇಂದ್ರ ಸರಕಾರಕ್ಕೆ ಅಭಿನಂದನೆಗಳು ಎಂದರು. ಕಾಶ್ಮೀರ ಉಳಿಸಲು ನಮ್ಮ ಸರಕಾರ ಕ್ರಮ ಕೈಗೊಂಡಿತ್ತು ಎಂದ ಅವರು, ಸಿದ್ದರಾಮಯ್ಯರ ಎಲ್ಲ ಹಗರಣಗಳ ದಾಖಲೆ ಸಂಗ್ರಹಿಸಲಾಗಿದೆ. ಈಗ ತನಿಖೆ ಮುಂದುವರಿಯಲಿದೆ ಎಂದರು.
ಕಾಂಗ್ರೆಸ್ ಶಾಪಗ್ರಸ್ಥ ಪಕ್ಷ: ಕಾಂಗ್ರೆಸ್ ಪಕ್ಷವು ಭ್ರಷ್ಟರ ಮೂಲ ಕೇಂದ್ರ. ಭಾರತ್ ಜೋಡೋಗಿಂತ ಮೊದಲು ಕಾಂಗ್ರೆಸ್ ಜೋಡೋ ಮಾಡಬೇಕಿದೆ. ಜಾತಿ ಜಾತಿಗಳನ್ನು ಒಡೆದ, ರಾಜ್ಯಗಳನ್ನು ಮತ್ತು ದೇಶ ಒಡೆದ ಶಾಪ ಕಾಂಗ್ರೆಸ್‍ಗಿದೆ. ಡಿಕೆಶಿ ಡೀಲ್ ಮಾಸ್ಟರ್ ಎಂದು ಅವರ ಪಕ್ಷದವರೇ ಹೇಳಿದ್ದಾರೆ. ಇಲ್ಲಿಯೂ ಡಿಕೆಶಿ- ಸಿದ್ದರಾಮಣ್ಣ ನಡುವೆ ಜಗಳ ನಡೆಯುತ್ತಿದೆ. ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಡಿಐಜಿ ಮಟ್ಟದ ಅಧಿಕಾರಿಯನ್ನು ನಮ್ಮ ಸರಕಾರ ಬಂಧಿಸಿದೆ ಎಂದು ವಿವರ ನೀಡಿದರು.
ಭ್ರಷ್ಟಾಚಾರ ಕುರಿತು ಕೆಂಪಣ್ಣ ದಾಖಲೆ ಕೊಟ್ಟಿಲ್ಲ. ದಾಖಲೆ ನೀಡಲು ಕಾಲಾವಕಾಶ ಕೊಟ್ಟಿದ್ದೆವು. ಇಂದಿನವರೆಗೆ ಕಾಂಗ್ರೆಸ್ ಮತ್ತು ಅವರ ಏಜೆಂಟರು ದಾಖಲೆಗಳನ್ನು ಕೊಟ್ಟಿಲ್ಲ. ಸಾಕ್ಷಿ ಇಲ್ಲದೆ ತನಿಖೆ ಮಾಡಲು ಹೇಗೆ ಸಾಧ್ಯ?.. ಸಾಕ್ಷಿ ಕೊಡದಿದ್ದಲ್ಲಿ ಪಕ್ಷದ ಮೂಲಕ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಓದಿ: ಸಾಮಾಜಿಕ ಜಾಲತಾಣದಲ್ಲಿ ಮುಂದುವರಿದ ಕಾಂಗ್ರೆಸ್‍ನ 'ಪೇ ಸಿಎಂ' ಅಭಿಯಾನ