ದಾವಣಗೆರೆ: ಯತ್ನಾಳ್ ಮಾತಿಗೆ ಬೆಲೆ ಕೊಡುವ ಅವಶ್ಯಕತೆ ಇಲ್ಲ. ತೋಳ ಬಂತು ತೋಳ ಎನ್ನುವ ಹಾಗೆ ಮಾತನಾಡುತ್ತಾರೆ ಎಂದು ಸಚಿವ ಬಿ.ಸಿ.ಪಾಟೀಲ್, ಶಾಸಕ ಯತ್ನಾಳ್ ಹೇಳಿಕೆಗೆ ತಿರಗೇಟು ನೀಡಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಶಾಸಕ ಯತ್ನಾಳ್ ಒಂದೊಂದೇ ವಿಷಯ ಹೇಳುತ್ತಾ ಹೋಗ್ತಾರೆ. ಅವರ ಮಾತಿಗೆ ಅಷ್ಟೊಂದು ಬೆಲೆ ಕೊಡುವ ಅವಶ್ಯಕತೆ ಇಲ್ಲ. ಅಮಿತ್ ಶಾ ಈಗಾಗಲೇ ಸ್ಪಷ್ಟವಾಗಿ ಮುಂದಿನ ಎರಡೂವರೆ ವರ್ಷ ಸಿಎಂ ಆಗಿ ಯಡಿಯೂರಪ್ಪ ಇರುತ್ತಾರೆ ಎಂದು ಹೇಳಿದ್ದಾರೆ. ಅದ್ದರಿಂದ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಎಂದರು.
ನಾಳೆ ನಡೆಯಲಿರುವ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಳೆ ಕೇಂದ್ರದಿಂದ ಒಳ್ಳೆಯ ಬಜೆಟ್ ನೀಡುವ ನಿರೀಕ್ಷೆ ಇದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಡಬಲ್ ಇಂಜಿನ್ ಇದ್ದಂತೆ ಎಂದು ಅಮಿತ್ ಶಾ ಹೇಳಿದ್ದಾರೆ. ರಾಜ್ಯಕ್ಕೆ ಒಳ್ಳೆಯ ಕೃಷಿ ಬಜೆಟ್ ನೀಡುತ್ತಾರೆ ಎನ್ನುವ ನಿರೀಕ್ಷೆ ಇದೆ. ಕೃಷಿ ವಲಯಕ್ಕೆ ಒತ್ತು ನೀಡಲಿದ್ದು, ಈ ಬಾರಿ ಪ್ರತ್ಯೇಕ ಕೃಷಿ ಬಜೆಟ್ ಇಲ್ಲ ಎಂದರು.
ಇನ್ನು ರಾಬರ್ಟ್ ಚಿತ್ರ ಬಿಡುಗಡೆ ಗೊಂದಲ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಒಳ್ಳೆ ಚಿತ್ರ ಇದ್ರೆ ಎಲ್ಲಾದ್ರೂ ನೋಡೇ ನೋಡ್ತಾರೆ. ರಾಬರ್ಟ್ ಚಿತ್ರ ಬಿಡುಗಡೆಯಂದೇ ಆಂಧ್ರದಲ್ಲಿ ದೊಡ್ಡ ನಟರ ಚಿತ್ರ ಬಿಡುಗಡೆ ಇತ್ತು. ಹಾಗಾಗಿ ಚಿತ್ರಮಂದಿರ ನೀಡಿಲ್ಲ ಎನ್ನಲಾಗುತ್ತಿದೆ. ಈಗಾಗಲೇ ಫಿಲ್ಮ್ ಚೇಂಬರ್ಗೆ ದೂರು ಸಹ ನೀಡಿದ್ದಾರೆ. ಅವರು ಸಮಸ್ಯೆ ಬಗೆಹರಿಸುತ್ತಾರೆ ಎಂದರು.