ದಾವಣಗೆರೆ: ಜಿಲ್ಲೆಯಲ್ಲಿ ಮತ್ತೊಂದು ಲಾಕ್ಅಪ್ ಡೆತ್ ಆರೋಪ ಕೇಳಿಬಂದಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಆರೋಪಿ ಕಸ್ಟಡಿಯಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಲಾಗ್ತಿದೆ.
ಇದು ಲಾಕಪ್ ಡೆತ್ ಎಂದು ಮೃತ ವ್ಯಕ್ತಿಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಅಲ್ಲದೇ ಇದಕ್ಕೆ ಕಾರಣವಾದ ಪೊಲೀಸರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆಯ ವಿವರ
ಚಿತ್ರದುರ್ಗ ತಾಲೂಕಿನ ಭರಮಸಾಗರ ಹೋಬಳಿಯ ಬಹದ್ದೂರಘಟ್ಟ ಗ್ರಾಮದ ನಿವಾಸಿ ಕುಮಾರ್ (35) ಎಂಬುವವರ ಮೇಲೆ ದಾವಣಗೆರೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣವೊಂದು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕುಮಾರ್ನನ್ನು ಸಿಇಎನ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು.
ಇದ್ದಕ್ಕಿದ್ದಂತೆ ಆರೋಪಿ ಕುಮಾರ್ ಸಾವನ್ನಪ್ಪಿದ್ದಾನೆ. ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇದರಿಂದ ಆರೋಪಿಯ ಕುಟುಂಬಸ್ಥರು ಇದೊಂದು ಲಾಕಪ್ ಡೆತ್ ಎಂದು ಆರೋಪಿಸುತ್ತಿದ್ದಾರೆ. ಇದಕ್ಕೆ ಕಾರಣವಾದ ಸಿಇಎನ್ ಪೊಲೀಸರನ್ನು ಬಂಧಿಸಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೇ, ಇಂದು ದಾವಣಗೆರೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಡಿಎಸ್ಎಸ್ ಸಂಘಟನೆ ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ಸಂಬಂಧ ಎಸ್ಪಿ ರಿಷ್ಯಂತ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದರು.
ತನಿಖೆ ನಡೆಸಲಾಗುವುದು: ರಿಷ್ಯಂತ್
ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ ರಿಷ್ಯಂತ್, ಮೃತಪಟ್ಟ ಕುಮಾರ್ ಅವರ ಕುಟುಂಬಸ್ಥರು ಲಾಕಪ್ ಡೆತ್ ಎಂದು ಆರೋಪಿಸಿದ್ದಾರೆ. ಅವರು ಪ್ರಕರಣ ದಾಖಲಿಸಿದ ಬಳಿಕ ಈ ಬಗ್ಗೆ ತನಿಖೆ ನಡೆಸಲಾಗುವುದು. ಕುಮಾರ್ ಹೇಗೆ ಮೃತಪಟ್ಟ ಎಂಬುದು ತನಿಖೆ ಬಳಿಕವೇ ಗೊತ್ತಾಗಲಿದೆ. ಅಗತ್ಯಬಿದ್ದರೆ ಸಿಐಡಿ ತನಿಖೆಗೂ ನೀಡಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಜಿಲ್ಲೆಯ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಪ್ರಕರಣ ನಡೆದ ಬಗ್ಗೆ ವರದಿಯಾಗಿತ್ತು.