ದಾವಣಗೆರೆ: ಕಳೆದ 16 ತಿಂಗಳಿನಿಂದ ಶಿಷ್ಯ ವೇತನ ನೀಡದ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಜೆಜೆಎಂ ಕಾಲೇಜಿನ ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ನಗರದ ಜಯದೇವ ವೃತ್ತದಲ್ಲಿ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಮುಷ್ಕರ ನಡೆಸುತ್ತಿದ್ದು, ಶಿಷ್ಯ ವೇತನ ನೀಡುವುದಾಗಿ ಲಿಖಿತ ಭರವಸೆ ನೀಡುವವರೆಗೆ ಹೋರಾಟ ನಿಲ್ಲದು ಎಂದು ಎಚ್ಚರಿಕೆ ನೀಡಿದ್ದಾರೆ. ಮೈಮೇಲೆ ಬಿಳಿ ಬಟ್ಟೆ, ನಮ್ಮದು ಖಾಲಿ ಹೊಟ್ಟೆ. ಶಿಷ್ಯ ವೇತನ ಬೇಕೇ ಬೇಕು ಎಂಬ ಘೋಷಣೆ ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಹಿತಾ, ಶಿಷ್ಯ ವೇತನ ನೀಡುವಂತೆ ಒತ್ತಾಯಿಸಿ ಸಿಎಂ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರೂ ಸೇರಿದಂತೆ ಸಂಬಂಧಪಟ್ಟ ಇಲಾಖೆಯವರನ್ನ ಭೇಟಿ ಮಾಡಿ ಮನವಿ ಮಾಡಿದ್ದೇವೆ. ಆದರೂ ಈ ಬಗ್ಗೆ ಹುಸಿ ಭರವಸೆ ಸಿಕ್ಕಿದೆ ಹೊರತು ಬೇಡಿಕೆ ಈಡೇರಿಲ್ಲ. ಸುಮಾರು ಒಂದೂವರೆ ವರ್ಷದಿಂದ ಸ್ಟೈಫಂಡ್ ನೀಡದ ಕಾರಣ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ನಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಕಾಲೇಜಿನ ಆಡಳಿತ ಮಂಡಳಿ ಶಿಷ್ಯ ವೇತನ ನೀಡುತ್ತೆಂದು ಹೇಳಿ ಕೈತೊಳೆದುಕೊಂಡಿದೆ ಎಂದು ಅಳಲು ತೋಡಿಕೊಂಡರು.
ಕಾಲೇಜಿನ ಆಡಳಿತ ಮಂಡಳಿಯವರು, ಪ್ರತಿ ವರ್ಷ ಕ್ಲಿನಿಕಲ್ ಫೀಯನ್ನು ಚಾಚು ತಪ್ಪದೇ ಸರ್ಕಾರಕ್ಕೆ ನೀಡಲಾಗುತ್ತಿದೆ. ಹಾಗಾಗಿ ಶಿಷ್ಯ ವೇತನ ನಾವು ನೀಡುವುದಿಲ್ಲ. ಸರ್ಕಾರವೇ ನೀಡಬೇಕು ಎಂದು ಹೇಳುತ್ತಿದ್ದಾರೆ. ಮಾರ್ಚ್ ತಿಂಗಳಿನಿಂದ ಕೊರೊನಾ ಸೋಂಕು ಹೆಚ್ಚಾದ ಕಾರಣ ಹಗಲು-ರಾತ್ರಿ ಕೆಲಸ ಮಾಡಿದ್ದೇವೆ. ಈಗ ಪ್ರತಿಭಟನೆ ಮಾಡುವ ಅನಿವಾರ್ಯತೆ ಎದುರಾಗಿದೆ. ಸುಮಾರು 232ಕ್ಕೂ ಹೆಚ್ಚು ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವೇತನ ಬಾರದ ಕಾರಣ ನಿತ್ಯದ ಖರ್ಚಿಗೂ ಪರದಾಡುವ ಸ್ಥಿತಿ ಇದೆ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರಕ್ಕೆ ಬರುತ್ತೇವೆ ಎಂದು ತಿಳಿಸಿದರು.
ಡಾ. ವಿನಯ್ ಮಾತನಾಡಿ, ಸಿ.ಜೆ. ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ರೋಗಿಗಳಿಗೆ ಕಷ್ಟವಾಗಬಾರದು ಎಂಬ ಕಾರಣಕ್ಕೆ ಸದ್ಯಕ್ಕೆ ಕೊರೊನಾ ಸೋಂಕಿತರಿಗೆ ಸಂಬಂಧಪಟ್ಟ ಸೇವೆ ನಿಲ್ಲಿಸಿಲ್ಲ. ಸದ್ಯಕ್ಕೆ ಅದನ್ನ ಹೊರತುಪಡಿಸಿ ಬೇರೆ ಎಲ್ಲಾ ಸೇವೆಗಳನ್ನು ಬಹಿಷ್ಕರಿಸಿ ಮುಷ್ಕರ ನಡೆಸುತ್ತಿದ್ದೇವೆ. ಸರ್ಕಾರ ನಮ್ಮನ್ನು ಜೀತದಾಳುಗಳಂತೆ ನೋಡುತ್ತಿದೆ. ಸುಪ್ರೀಂಕೋರ್ಟ್ ಸಹ ಕೊರೊನಾ ವಿರುದ್ಧ ಹೋರಾಡುವ ವೈದ್ಯರಿಗೆ ಸಂಬಳ ನೀಡುವಂತೆ ಸೂಚಿಸಿದ್ದರೂ ಸಹ ಸಂಬಳ ನೀಡುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.