ದಾವಣಗೆರೆ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸಿದೆ. ಇಂದು ಕೂಡ ಮಳೆ ಮುಂದುವರೆದಿದ್ದು, ರೈತರು ಹಾಗೂ ಜನಸಾಮಾನ್ಯರು ಹೈರಾಣಾಗಿದ್ದಾರೆ. ಭಾರಿ ಮಳೆಗೆ ನೂರಾರು ಎಕರೆ ಭತ್ತದ ಬೆಳೆ ನೆಲಕಚ್ಚಿದ್ದು, ಬೆಳೆಗಾರರು ಕಂಗಲಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 24.9 ಮಿ.ಮೀ. ಸರಾಸರಿ ಮಳೆಯಾಗಿದ್ದು, ಅಂದಾಜು 55.16 ಲಕ್ಷ ರೂ ಬೆಳೆ ಹಾನಿ ಸಂಭವಿಸಿದೆ ಎನ್ನಲಾಗ್ತಿದೆ.
ಹರಿಹರ ತಾಲೂಕಿನಲ್ಲಿ ದಾಖಲೆಯ 30 ಮಿ.ಮೀ ಮಳೆಯಾಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಚನ್ನಗಿರಿ ತಾಲೂಕಿನಲ್ಲಿ ನಿನ್ನೆ(ಮಂಗಳವಾರ) 27.3 ಮಿ.ಮೀಯಾಗಿದೆ. ನ್ಯಾಮತಿಯಲ್ಲಿ 48.8, ದಾವಣಗೆರೆ 24.7, ಜಗಳೂರು 8.5 ಹಾಗೂ ಹೊನ್ನಾಳಿಯಲ್ಲಿ 28.0 ಮಿ.ಮೀ ಮಳೆಯಾಗಿದೆ.
ದಾವಣಗೆರೆ ತಾಲೂಕಿನಲ್ಲಿ ಎರಡು ಮನೆ, ಭತ್ತದ ಬೆಳೆ, ಅಡಿಕೆ, ಜಾನುವಾರು ಸಾವು ಈ ಎಲ್ಲ ಸೇರಿ ಒಟ್ಟು 5.30 ಲಕ್ಷ ರೂ. ನಷ್ಟ ಸಂಭವಿಸಿದೆ. ಇದಲ್ಲದೇ, ಹರಿಹರ ತಾಲೂಕಿನಲ್ಲಿ 5 ಕಚ್ಚಾ ಮನೆ ಭಾಗಶಃ ಹಾನಿಯಾಗಿವೆ. 285 ಎಕರೆ ಭತ್ತದ ಬೆಳೆ, 1 ಎಕರೆ ಬಾಳೆ ಬೆಳೆ ಹಾನಿಯಾಗಿದೆ. ಒಂದೊಂದು ಕುರಿ ಮೃತಪಟ್ಟಿದ್ದು, ಸೇರಿ ಒಟ್ಟು 18.76 ಲಕ್ಷ ರೂ. ನಷ್ಟ ಸಂಭವಿಸಿದೆ.
ಹೊನ್ನಾಳಿ ತಾಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ಹಾನಿ, 40 ಎಕರೆ ಭತ್ತದ ಬೆಳೆ ಹಾಗೂ 16 ಎಕರೆ ಅಡಿಕೆ ಬೆಳೆ ಹಾನಿಯಾಗಿದೆ. ಒಟ್ಟು ರೂ.18.20 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಇದಲ್ಲದೇ ಚನ್ನಗಿರಿ ತಾಲೂಕಿನಲ್ಲಿ 2 ಪಕ್ಕಾ ಮನೆ, 1 ಕಚ್ಚಾ ಮನೆ ಹಾಗೂ 1 ಎಕರೆ ಭತ್ತದ ಬೆಳೆ ಹಾನಿಯಾಗಿದೆ. ಜಗಳೂರು ತಾಲೂಕು ವ್ಯಾಪ್ತಿಯಲ್ಲಿ 2 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, 6.30 ಎಕರೆ ಪಪ್ಪಾಯಿ ಬೆಳೆ, 3.00 ಎಕರೆ ಎಲೆಬಳ್ಳಿ, 2.00 ಎಕರೆ ಟೊಮೆಟೊ ಹಾನಿಯಾಗಿದೆ. ಒಟ್ಟು 10.90 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.
ಮಳೆ ಹಾನಿ ಪ್ರದೇಶಕ್ಕೆ ಅಧಿಕಾರಿಗಳ ದಂಡು: ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಹರಿಹರ, ದಾವಣಗೆರೆ ತಹಶೀಲ್ದಾರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ ರೂ 55.16 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.