ಬೆಂಗಳೂರು: ಸದ್ಯ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಂ ಸಮುದಾಯದ ಜನಪ್ರಿಯ ಪ್ರತಿನಿಧಿ ಎನ್ನಿಸಿಕೊಂಡಿರುವ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ನಿಧಾನವಾಗಿ ರಾಷ್ಟ್ರ ರಾಜಕಾರಣದತ್ತ ಒಲವು ತೋರಿಸುತ್ತಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಸುದ್ದಿ ಮಾಡುತ್ತಿದೆ.
ನ್ಯಾಷನಲ್ ಟ್ರಾವೆಲ್ಸ್ ಸಂಸ್ಥೆಯ ಪಾಲುದಾರರಾಗಿ ಸಾಕಷ್ಟು ಆರ್ಥಿಕ ಸಬಲತೆ ಹೊಂದಿದ್ದ ಜಮೀರ್, 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಗೆಲುವು ದಾಖಲಿಸಿದ್ದರು. 2018ರ ಮಾರ್ಚ್ 25ರಂದು ಇತರೆ ಆರು ಜೆಡಿಎಸ್ ಶಾಸಕರ ಜತೆ ಸೇರಿ ಜಮೀರ್ ಕಾಂಗ್ರೆಸ್ ಸೇರ್ಪಡೆಯಾದರು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿಯೂ ಇದ್ದರು. ಇದೀಗ ತಮ್ಮ ರಾಜಕೀಯ ಗುರು ಎಂದೇ ಕರೆದುಕೊಳ್ಳುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹಕಾರದೊಂದಿಗೆ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರ ಪರ ಪ್ರಚಾರ ಮಾಡುವ, ಮುಸ್ಲಿಂ ಮತವನ್ನು ಒವೈಸಿ ಕೈನಿಂದ ಕಿತ್ತುಕೊಳ್ಳುವ ಪ್ರಯತ್ನಕ್ಕೆ ಕೈ ನಾಯಕರು ಮುಂದಾಗಿದ್ದಾರೆ. ಮುಸಲ್ಮಾನ್ ಸಮುದಾಯದ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಪಕ್ಕಾ ಮಾಡಿಕೊಡುವ ಉದ್ದೇಶದೊಂದಿಗೆ ಪ್ರಚಾರದ ಕಣಕ್ಕಿಳಿಯಲು ಜಮೀರ್ ನಿರ್ಧರಿಸಿದ್ದಾರೆ.
ಹಾಲಿ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯಾಗಿ ಪ್ರಿಯಾಂಕ ಗಾಂಧಿ ಕಾರ್ಯನಿರ್ವಹಿಸುತ್ತಿದ್ದಾರೆ. 2022ರ ವಿಧಾನಸಭೆ ಚುನಾವಣೆಯಲ್ಲಿ ಜಮೀರ್ ಯುಪಿಯಲ್ಲಿ ಒಂದಿಷ್ಟು ಕಾಂಗ್ರೆಸ್ ಪ್ರತಿನಿಧಿಗಳನ್ನು ಗೆಲ್ಲಿಸಿಕೊಟ್ಟರೆ ಇವರಿಗೆ ಇನ್ನಷ್ಟು ಜನಪ್ರಿಯತೆ ಹೆಚ್ಚಲಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಇಲ್ಲವೇ ಮುಸ್ಲಿಂ ಸಮುದಾಯದ ನಾಯಕರು ಹೆಚ್ಚಿರುವ ಇನ್ನಾವುದೇ ಕ್ಷೇತ್ರದಿಂದ ಸ್ಪರ್ಧಿಸಿ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಲು ಪ್ರಯತ್ನ ಆರಂಭಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಕಳೆದ ಕೆಲ ತಿಂಗಳಿಂದ ಸಿದ್ದರಾಮಯ್ಯರನ್ನು ಚಾಮರಾಜಪೇಟೆಗೆ ಕರೆತರುವ ಯತ್ನದಲ್ಲಿ ಬಹುತೇಕ ಸಫಲವಾಗಿರುವ ಜಮೀರ್ ಮತ್ತೊಮ್ಮೆ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಮೂಲಕ ಸಿದ್ದರಾಮಯ್ಯಗೆ ಒಂದು ಗಟ್ಟಿ ಕ್ಷೇತ್ರ ಒದಗಿಸಿಕೊಡುವ ಯತ್ನ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ತಾವು ರಾಷ್ಟ್ರ ರಾಜಕಾರಣದ ಹಂಬಲ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅಸ್ತು ಎಂದಿರುವ ಸಿದ್ದರಾಮಯ್ಯ, ತಮ್ಮ ಆಪ್ತನನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಿಕೊಡಲು ಮುಂದಾಗಿದ್ದಾರೆ.
ಈ ನಿಟ್ಟಿನಲ್ಲಿಯೇ ಜಮೀರ್ ಒಂದೆರಡು ಸಲ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. ವಿಧಾನಸಭೆ ಉಪಚುನಾವಣೆಯಲ್ಲಿ ಮುಸಲ್ಮಾನ್ ಮತದಾರರೇ ಹೆಚ್ಚಿರುವ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರದ ಪ್ರಚಾರಕ್ಕೆ ಜಮೀರ್ ಬರುತ್ತಿಲ್ಲ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ದಿಲ್ಲಿಯಿಂದ ಹಿಂದಿರುಗಿ ಪ್ರಚಾರ ನಡೆಸಿದರು. ಜಮೀರ್ಗೆ ಪ್ರಿಯಂಕಾ ಗಾಂಧಿ ಭೇಟಿ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ. ಇನ್ನೊಮ್ಮೆ ದಿಲ್ಲಿಗೆ ತೆರಳಲಿರುವ ಜಮೀರ್ ಫಲಪ್ರದ ಮಾತುಕತೆ ನಡೆಸಿ ವಾಪಸಾಗಲಿದ್ದಾರೆ ಎಂಬ ಮಾಹಿತಿ ಇದೆ.
ಮೈತ್ರಿಯಾದರೂ ಅನುಕೂಲ: ಹಿಂದಿನಂತೆ ಈ ಸಾರಿಯೂ ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶದಲ್ಲಿ ಮಹಾಘಟಬಂಧನಕ್ಕೆ ಮುಂದಾದರೆ ಜಮೀರ್ ಪ್ರಚಾರಕ್ಕೆ ತೆರಳುವುದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಅವರೂ ಸಹ ಸಮಾನಮನಸ್ಕ ಶಾಸಕರಾಗಿ ಹೋಗಲಿದ್ದಾರೆ. ಇದರಿಂದ ಎಲ್ಲಾ ರೀತಿಯಲ್ಲೂ ತಮಗೆ ರಾಷ್ಟ್ರ ರಾಜಕಾರಣಕ್ಕೇರಲು ಉತ್ತರ ಪ್ರದೇಶ ಚುನಾವಣೆ ಅತ್ಯಂತ ಪ್ರಮುಖವಾಗಿದೆ ಎಂದು ಜಮೀರ್ ನಂಬಿದ್ದಾರೆ ಎಂಬ ಮಾಹಿತಿ ಇದೆ.
ಜಮೀರ್ ಪ್ರತಿಕ್ರಿಯೆ:
'ಆಸೆ ಯಾರಿಗಿರಲ್ಲ?': ತಾವು ರಾಷ್ಟ್ರ ರಾಜಕಾರಣದತ್ತ ಒಲವು ಹೊಂದಿದ್ದರ ಬಗ್ಗೆ ಪರೋಕ್ಷವಾಗಿ ವಿವರಿಸಿದ ಜಮೀರ್ ಅಹ್ಮದ್ ಖಾನ್, ರಾಜ್ಯದಲ್ಲಿ ಮಾತ್ರವಲ್ಲ, ರಾಷ್ಟ್ರ ರಾಜಕಾರಣದಲ್ಲಿಯೂ ಹೆಸರು ಮಾಡಬೇಕೆಂಬ ಆಸೆ ಯಾರಿಗೆ ಇರಲ್ಲ?. ಆದರೆ ನಾನು ರಾಜ್ಯದಲ್ಲಿ ಇನ್ನಷ್ಟು ಹೆಸರು ಸಂಪಾದಿಸಬೇಕಿದೆ. ಆದರೆ ಪಕ್ಷ ಬಯಸಿದರೆ ಎಲ್ಲಿ ಬೇಕಾದರೂ ಸೇವೆ ಸಲ್ಲಿಸಲು ಸಿದ್ದ ಎಂದರು.
ನಾನು ಚಾಮರಾಜಪೇಟೆ ಕ್ಷೇತ್ರ ಬಿಡುತ್ತೇನೆ ಎನ್ನುವುದು ಈಗಲೂ ಸತ್ಯಕ್ಕೆ ದೂರವಾದದ್ದು. ರಾಷ್ಟ್ರ ರಾಜಕಾರಣದತ್ತ ಈಗಲೇ ತೆರಳುವ ಇಚ್ಛೆ ಇಲ್ಲ. ಆದರೆ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಬೇಕಾಗುತ್ತದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ಆಸೆ ತುಂಬಾ ಇದೆ. ಆದರೆ ಅದಕ್ಕೆ ಹೈಕಮಾಂಡ್ನಿಂದ ಅವಕಾಶ ಸಿಗುವುದೇ ಎನ್ನುವ ನಿರೀಕ್ಷೆಯಲ್ಲಿ ಇದ್ದೇನೆ ಎಂದಿದ್ದಾರೆ.