ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳ್ಳಂದೂರು ಐಟಿ ಕಾರಿಡಾರ್ ಕೆಐಎಡಿಬಿ ಭೂ ಸ್ವಾಧೀನ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಹಿನ್ನೆಲೆ ಕೂಡಲೇ ಹೈಕೋರ್ಟ್ ಆದೇಶಕ್ಕೆ ತಲೆಬಾಗಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಯುವ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಮೌರ್ಯ ವೃತ್ತದ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಯುವ ಕಾಂಗ್ರೆಸ್ ನಾಯಕ ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಯಡಿಯೂರಪ್ಪನವರು ಡಿನೋಟಿಫಿಕೇಶನ್ ಅಕ್ರಮ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ಆದೇಶಕ್ಕೆ ತಲೆಬಾಗಿ ರಾಜೀನಾಮೆ ನೀಡಬೇಕು.
ಓದಿ-ಅಯೋಧ್ಯಾ ಪ್ರಾಚೀನ ವೈಭವ ಪುನಃಸ್ಥಾಪಿಸಲು ಸರ್ಕಾರ ಬದ್ಧ : ಯೋಗಿ ಘೋಷಣೆ
ಬಿಜೆಪಿ ಭ್ರಷ್ಟಾಚಾರದ ಪ್ರಮುಖ ಮುಖ ಎಂಬುದು ತಿಳಿದಿದ್ದರೂ ಬಿಎಸ್ವೈ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸುವುದು ಬಿಜೆಪಿ ಪಕ್ಷಕ್ಕೆ ಅನಿವಾರ್ಯ ಎಂಬುದನ್ನು ರಾಜ್ಯ ಬಿಜೆಪಿ ಜನತೆಗೆ ತಿಳಿಸಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇವೆ ಎಂಬ ಮಾತು ಸುಳ್ಳು. ಇದು ಜನರನ್ನು ವಂಚಿಸುವ ಹೇಳಿಕೆಯಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ಪಕ್ಷಕ್ಕೆ ಇಲ್ಲ. ಈ ಹಗರಣದಲ್ಲಿ ನ್ಯಾಯಾಲಯ ನೀಡಿರುವ ತೀರ್ಪು ಅತ್ಯಂತ ಮಹತ್ವವಾಗಿದೆ. ನ್ಯಾಯಾಲಯದ ಅಧೀನದಲ್ಲಿ ತನಿಖೆ ನಡೆಯಬೇಕು ಎಂಬ ನ್ಯಾಯಾಲಯದ ಆದೇಶ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನೀಡಿರುವ ನಿರ್ದೇಶನ ಎಂಬುದನ್ನು ಅರಿತು ಕೂಡಲೇ ಬಿಜೆಪಿ ವರಿಷ್ಠರು ಯಡಿಯೂರಪ್ಪನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕೆಂದು ಆಗ್ರಹಿಸಿದರು.