ಬೆಂಗಳೂರು: ಮನೆ ಬಾಡಿಗೆಗಿದ್ದ ಯುವತಿಯನ್ನು ಹೆದರಿಸಿ ತಲೆಗೆ ಪಿಸ್ತೂಲಿಟ್ಟು ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮನೆ ಮಾಲೀಕನನ್ನು ಅಶೋಕನಗರ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ. ಬಿಹಾರ ಮೂಲದ ಬೆಂಗಳೂರು ನಿವಾಸಿ ಅನಿಲ್ ರವಿಶಂಕರ್ ಪ್ರಸಾದ್ ಬಂಧಿತನಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಮೂರು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.
ಬಿಹಾರದ ಆರೋಪಿಯು ಟೈಲ್ಸ್ ಬಿಸ್ನೆಸ್ ಮಾಡಿಕೊಂಡು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾನೆ. ಈತನಿಗೆ ಸೇರಿದ ಮನೆಯಲ್ಲಿ ಪಶ್ಚಿಮ ಬಂಗಾಳದ ಯುವತಿ ಕಳೆದ ಮಾರ್ಚ್ನಿಂದ ಬಾಡಿಗೆಗೆ ವಾಸಿಸುತ್ತಿದ್ದಳು. ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಯುವತಿಯೊಂದಿಗೆ ಮನೆಗೆ ಆಗಾಗ ಸ್ನೇಹಿತರು ಬರುತ್ತಿರುವ ಬಗ್ಗೆ ಮನೆ ಮಾಲೀಕ ತಗಾದೆ ತೆಗೆಯುತ್ತಿದ್ದನಂತೆ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.
ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ 'ನಿರ್ಭಯಾ' ರೀತಿಯ ಗ್ಯಾಂಗ್ರೇಪ್: ಹಲ್ಲೆ ನಡೆಸಿ ಬಾಲಕಿ ಮೇಲೆ ಅತ್ಯಾಚಾರ
ಕೆಲವು ದಿನಗಳ ಬಳಿಕ ಮನೆಯಲ್ಲಿ ಯುವತಿಯ ಸ್ನೇಹಿತನೊಬ್ಬ ಉಳಿದುಕೊಂಡಿದ್ದ. ಇದನ್ನು ಗಮನಿಸಿದ ಮಾಲೀಕ ಮನೆಯಾಚೆ ನಿಲ್ಲಿಸಿದ್ದ ಸ್ನೇಹಿತನ ಬೈಕ್ ಅನ್ನು ಲಾಕ್ ಮಾಡಿದ್ದಾನೆ. ಇದಾದ ಮಾರನೇ ದಿನ ಬೆಳಗ್ಗೆ ಪೊಲೀಸರು ಬಂದು ಲಾಕ್ ಮಾಡಿದ್ದಾರೆ. ಮನೆ ಬಾಡಿಗೆಗೆ ಕೊಟ್ಟರೆ ಇಲ್ಲಸಲ್ಲದ ಚಟುವಟಿಕೆ ನಡೆಸುತ್ತೀರಾ. ಪೊಲೀಸರು ಬಂದರೆ ನಿಮ್ಮ ಮೇಲೆ ಕೇಸ್ ದಾಖಲಿಸುತ್ತಾರೆ ಎಂದು ಯುವಕನಿಗೆ ಭಯ ಹುಟ್ಟಿಸಿದ್ದಾನೆ. ನಂತರ ತಾನು ಪೊಲೀಸರೊಂದಿಗೆ ಕೇಸ್ ದಾಖಲಿಸದಂತೆ ಮಾತನಾಡಿರುವುದಾಗಿ ಹೇಳಿ ಅಲ್ಲಿಂದ ಹುಡುಗನನ್ನು ಕಳುಹಿಸಿದ್ದ.
ಈ ಘಟನೆಯ ಬಗ್ಗೆ ಪೋಷಕರಿಗೆ ತಿಳಿಸುವುದಾಗಿ ಯುವತಿ ಹೇಳಿದ್ದಾಳೆ. ಕಳೆದ ಏಪ್ರಿಲ್ 11ರಂದು ಆಕೆಯ ಮನೆಗೆ ಹೋದ ಮಾಲೀಕ ಮಾತನಾಡುವ ನೆಪದಲ್ಲಿ ತನ್ನ ಬಳಿಯಿದ್ದ ಲೈಸೆನ್ಸ್ ರಿವಾಲ್ವರ್ ತಲೆಗಿಟ್ಟು ತನ್ನೊಂದಿಗೆ ಸಹಕರಿಸುವಂತೆ ಒತ್ತಡ ಹೇರಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ನಡೆದಿದ್ದ ಕೃತ್ಯದ ಬಗ್ಗೆ ಇತ್ತೀಚೆಗೆ ಪೋಷಕರ ಬಳಿ ಯುವತಿ ಹೇಳಿಕೊಂಡಿದ್ದಾಳೆ. ಆಕೆಯನ್ನು ಸಮಾಧಾನಪಡಿಸಿ ನೀಡಿದ ದೂರಿನ ಮೇರೆಗೆ ನಿನ್ನೆ ಮನೆ ಮಾಲೀಕನನ್ನು ಬಂಧಿಸಿರುವ ಅಶೋಕನಗರ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.