ವರ್ತೂರು (ಬೆಂಗಳೂರು): ಕಳ್ಳತನ ಆರೋಪದ ಮೇಲೆ ಪೊಲೀಸರು ಠಾಣೆಯಲ್ಲಿ ಹಲ್ಲೆ ನಡೆಸಿದ ಪರಿಣಾಮ ಯುವಕನೋರ್ವ ಒಂದು ಕೈ ಕಳೆದುಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ.
ಬೆಂಗಳೂರು ವೈಟ್‌ಫೀಲ್ಡ್ ವಿಭಾಗ ವ್ಯಾಪ್ತಿಯಲ್ಲಿನ ವರ್ತೂರು ಪೊಲೀಸ್ ಠಾಣಾ ಸಿಬ್ಬಂದಿ ಮತ್ತು ಠಾಣೆಯ ಇನ್ಸ್‌ಪೆಕ್ಟರ್ ಸೋಮಶೇಖರ್, ಎಸ್ಐ ಮಂಜುನಾಥ್ ವಿರುದ್ಧ ಯುವಕನ ಪೋಷಕರು ಆರೋಪಿಸಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. 22 ವರ್ಷದ ಸಲ್ಮಾನ್ ಖಾನ್ ಬಲಗೈ ಕಳೆದುಕೊಂಡ ಯುವಕ.

ವಾಹನಗಳ ಬ್ಯಾಟರಿ ಕಳವು ಆರೋಪ ಪ್ರಕರಣ ಸಂಬಂಧ ಅಕ್ಟೋಬರ್ 27ರಂದು ವರ್ತೂರು ಠಾಣಾ ಪೊಲೀಸರು ಬಂಧಿಸಿ, ಮೂರು ದಿನಗಳ ಕಾಲ ಚಿತ್ರಹಿಂಸೆ ಕೊಟ್ಟಿದ್ದರು. ಬಳಿಕ ಬ್ಯಾಟರಿ ಕಳವು ಪ್ರಕರಣ ಮಾತ್ರವಲ್ಲದೆ, ಇನ್ನಿತರೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಳ್ಳುವಂತೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಸಲ್ಮಾನ್ ಖಾನ್ ದೂರಿದ್ದಾರೆ.
ನನ್ನ ಮಗನನ್ನು ಯಾವುದೋ ಕಳ್ಳತನದ ಸುಳ್ಳು ಆರೋಪದಲ್ಲಿ ಸಿಲುಕಿಸಿ ಮಾರಣಾಂತಿಕವಾಗಿ ಹೊಡೆದಿದ್ದಾರೆ. ಇದರಿಂದಾಗಿ ಆತನ ಬಲಗೈಗೆ ಭಾರಿ ಪೆಟ್ಟು ಬಿದ್ದು, ರಕ್ತ ಹೆಪ್ಪುಗಟ್ಟಿತ್ತು. ತಕ್ಷಣವೇ ಸಲ್ಮಾನ್ನನ್ನು ವೈದೇಹಿ ಆಸ್ಪತ್ರೆಗೆ ಸೇರಿಸಿದ್ದೆವು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹಾಸ್ಮಟ್ ಆಸ್ಪತ್ರೆಗೆ ಸೇರಿಸಿದ್ದೆವು. ಆಗ ಸಲ್ಮಾನ್ ಕೈ ಪರಿಶೀಲಿಸಿದ ವೈದ್ಯರು, ಕೈಗೆ ಭಾರಿ ಏಟು ಬಿದ್ದಿದ್ದು, ಕೀವು ತುಂಬಿದೆ. ಜೊತೆಗೆ ರಕ್ತ ಹೆಪ್ಪುಗಟ್ಟಿದೆ. ಇದರಿಂದ ಕೈ ಕತ್ತರಿಸಬೇಕು ಎಂದು ಹೇಳಿದ್ದರು. ಬಳಿಕ ಶಸ್ತ್ರ ಚಿಕಿತ್ಸೆ ಮೂಲಕ ಕೈ ಕತ್ತರಿಸಲಾಗಿದೆ. ಶಸ್ತ್ರ ಚಿಕಿತ್ಸೆಗೆ ಎರಡೂವರೆ ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಪೊಲೀಸರ ಸ್ಪಷ್ಟನೆ: ಕಳ್ಳತನ ದೂರಿನ ಮೇರೆಗೆ ಸಲ್ಮಾನ್ನನ್ನು ಕರೆತಂದದ್ದು ನಿಜ. ವಿಚಾರಣೆ ವೇಳೆಯಲ್ಲಿ ಎರಡು ಬ್ಯಾಟರಿಗಳನ್ನು ತಂದು ಕೊಟ್ಟಿದ್ದಾನೆ. ಠಾಣೆಗೆ ಕರೆತರುವ ಮೊದಲೇ ಬೈಕ್ ವೀಲಿಂಗ್ ಮಾಡುವಾಗ ಬೈಕ್ನಿಂದ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡ ಬಗ್ಗೆ ವಿಚಾರಣೆ ವೇಳೆ ತಿಳಿಸಿದ್ದ. ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳದ ಕಾರಣ ಈ ರೀತಿ ಆಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ಇದನ್ನೂ ಓದಿ: ಶವಾಗಾರದಲ್ಲಿ ಕೋವಿಡ್ ಸೋಂಕಿತರ 2 ಕೊಳೆತ ಮೃತದೇಹ ಪತ್ತೆ: ಬೆಂಗಳೂರು ESI ಆಸ್ಪತ್ರೆ ಡೀನ್ ತಲೆದಂಡ!)