ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಆರಂಭಕ್ಕೂ ಮುನ್ನ ಮೊದಲ ಡೋಸ್ ಮುಕ್ತಾಯದ ಗುರಿ ಹೊಂದಿದ್ದೇವೆ ಎಂದು ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ ಚಂದ್ರ ತಿಳಿಸಿದರು.
ಅಕ್ಟೋಬರ್ ಅಂತ್ಯಕ್ಕೆ ಮೂರನೇ ಅಲೆ ಬಗ್ಗೆ ಎಚ್ಚರಿಕೆಯನ್ನ ಕೇಂದ್ರ ಹಾಗೂ ರಾಜ್ಯದ ತಜ್ಞರು ನೀಡಿದ್ದಾರೆ. ಹೀಗಾಗಿ ಇದಕ್ಕೂ ಮೊದಲು ಪ್ರತಿಯೊಬ್ಬರೂ ಕೋವಿಡ್ ಮೊದಲ ಡೋಸ್ ಪಡೆಯುವಂತೆ ಜಾಗೃತಿ ಮೂಡಿಸಲಾಗುವುದು. ರಾಜ್ಯಾದ್ಯಂತ ಈಗಾಗಲೇ ಶೇ. 80 ರಷ್ಟು ಮೊದಲ ಡೋಸ್ ಹಾಗೂ ಶೆೇ.30 ರಷ್ಟು ಎರಡನೇ ಡೋಸ್ ಮುಗಿದಿದೆ. ಡಿಸೆಂಬರ್ ಅಂತ್ಯದೊಳಗೆ ಸಂಪೂರ್ಣ ಲಸಿಕೀಕರಣ ಮುಗಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ನಿನ್ನೆ ನಡೆದ ಬೃಹತ್ ಲಸಿಕಾ ಮೇಳ ಅಭಿಯಾನದಲ್ಲಿ ಆರೋಗ್ಯ ಇಲಾಖೆ 23,08,000 ಲಸಿಕೆ ಹಾಕುವ ಗುರಿ ಹೊಂದಿತ್ತು. ಬೆಳಗ್ಗೆ ಶುರುವಾಗಿ ರಾತ್ರಿ 10.30ರ ವರೆಗೆ 10,50,756 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಶೇಕಡ 45 ರಷ್ಟು ಗುರಿ ತಲುಪಲಾಗಿದೆ. ರಾಜ್ಯಾದ್ಯಂತ ಈ ವರೆಗೆ ಮೊದಲ ಡೋಸ್ ಲಸಿಕೆಯನ್ನ 3,90,50,665 ಮಂದಿ ಪಡೆದಿದ್ದಾರೆ. ಎರಡನೇ ಡೋಸ್ 1,68,90,126 ಪೂರ್ಣ ಗೊಂಡಿದೆ. ಒಟ್ಟಾರೆ 5,59,40,791 ಮಂದಿ ಈವರೆಗೆ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.