ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ರೀತಿ ವೇತನ ಶ್ರೇಣಿ ಮತ್ತು ಭತ್ಯೆಗಳನ್ನು ಪರಿಷ್ಕರಿಸಲು ಅಧಿಕಾರಿಗಳ ವೇತನ ಸಮಿತಿ ರಚಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಬಂದಿರುವ ಮನವಿ ಪರಿಗಣಿಸಿ ಅಧಿಕಾರಿಗಳ ವೇತನ ಸಮಿತಿ ರಚಿಸುವ ಬಗ್ಗೆ 2022-23ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಘೋಷಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ರಾಜ್ಯದಲ್ಲಿ ಶ್ರೀಸಾಮಾನ್ಯರ, ರೈತರ, ಕೂಲಿ ಕಾರ್ಮಿಕರ ಅಭ್ಯುದಯಕ್ಕಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಸರ್ಕಾರಕ್ಕೆ ಉತ್ತಮ ಹೆಸರು ತರುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದ್ದಾರೆ. ಕೋವಿಡ್-19 ಸಂದರ್ಭದಲ್ಲಿ ಸರ್ಕಾರಿ ನೌಕರರು ಜೀವದ ಹಂಗು ತೊರೆದು ದಕ್ಷತೆಯಿಂದ ಕೆಲಸ ನಿರ್ವಹಿಸಿ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಹಾಗೂ ಸೋಂಕಿತರ ಚಿಕಿತ್ಸೆ, ನಿರ್ವಹಣೆಯಲ್ಲಿ ಅನನ್ಯ ಕೆಲಸ ನಿರ್ವಹಿಸಿದ್ದಾರೆ. ಇದರಿಂದಾಗಿ ರಾಜ್ಯಕ್ಕೆ ಉತ್ತಮ ಹೆಸರು ಬಂದಿರುತ್ತದೆ.
ರಾಜ್ಯ ಸರ್ಕಾರವು ಪ್ರತೀ ಐದು ವರ್ಷಗಳಿಗೊಮ್ಮೆ ರಾಜ್ಯ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳನ್ನು ಪರಿಷ್ಕರಿಸುವ ಸಂಪ್ರದಾಯವನ್ನು ಹೊಂದಿರುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ಸಹ 5ನೇ ವೇತನ ಆಯೋಗವು ನೀಡಿದ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಿರುವುದನ್ನು ಇಲ್ಲಿ ಸ್ಮರಿಸುತ್ತಾ, ಇದಲ್ಲದೇ ಸರ್ಕಾರಿ ನೌಕರರ ಪರವಾದ ಆರೋಗ್ಯ ಇನ್ನಿತರೆ ಯೋಜನೆಗಳನ್ನು ಜಾರಿಗೊಳಿಸಿರುತ್ತೇನೆ ಎಂದು ಉಲ್ಲೇಖಿಸಿ ಪತ್ರ ಬರೆದು ಸರ್ಕಾರಿ ನೌಕರರ ಪರ ಬಿಎಸ್ವೈ ಧ್ವನಿ ಎತ್ತಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಯಲ್ಲಿ, ಕೇಂದ್ರ ಸರ್ಕಾರವು 2016ರಲ್ಲಿ 7 ನೇ ವೇತನ ಆಯೋಗದ ಶಿಫಾರಸ್ಸುಗಳನ್ನಾಧರಿಸಿ ತನ್ನ ನೌಕರರ ವೇತನ ಹಾಗೂ ಭತ್ಯೆಗಳನ್ನು ಪರಿಷ್ಕರಿಸಿರುತ್ತದೆ. ಈಗಾಗಲೇ 25 ರಾಜ್ಯಗಳಲ್ಲಿ ಕೇಂದ್ರ ಮಾದರಿಯ ವೇತನ ಪದ್ಧತಿ ಜಾರಿಯಲ್ಲಿದೆ. ರಾಷ್ಟ್ರದ ಜಿ.ಎಸ್.ಡಿ.ಪಿ. ಅವಲೋಕಿಸಿದಲ್ಲಿ ರಾಜ್ಯ ಸರ್ಕಾರವು ಅಭಿವೃದ್ಧಿ, ಪ್ರಗತಿ ಹಾಗೂ ಆರ್ಥಿಕ ಬೆಳವಣಿಗೆಯಲ್ಲಿ ರಾಷ್ಟ್ರದಲ್ಲೇ 6 ನೇ ಸ್ಥಾನದಲ್ಲಿರುತ್ತದೆ. ಈ ಪ್ರಗತಿಗೆ ರಾಜ್ಯ ಸರ್ಕಾರಿ ನೌಕರರ ಸೇವೆ ಹಾಗೂ ಪಾತ್ರ ಮುಖ್ಯವಾಗಿದೆ ಎಂದು ವಿವರಿಸಿ ಕೇಂದ್ರ ಮಾದರಿಯ ವೇತನವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೂ ನೀಡಲು “ಅಧಿಕಾರಿಗಳ ವೇತನ ಸಮಿತಿ” ಯನ್ನು ರಚಿಸಲು ಯಡಿಯೂರಪ್ಪ ವಿನಂತಿಸಿದ್ದಾರೆ.
ಇದನ್ನೂ ಓದಿ: ಮಾದಪ್ಪನ ಬೆಟ್ಟದಲ್ಲಿ ಅದ್ಧೂರಿ ಶಿವರಾತ್ರಿ ರಥೋತ್ಸವ..
ಹಾಗಾಗಿ ಇತರೆ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಸಹ ಕೇಂದ್ರ ಮಾದರಿಯ ವೇತನವನ್ನು ನೀಡುವ ಅಗತ್ಯವಿದ್ದು, ಪರಾಮರ್ಶೆ ಮತ್ತು ಅನುಷ್ಠಾನಕ್ಕಾಗಿ “ಅಧಿಕಾರಿಗಳ ವೇತನ ಸಮಿತಿ” ರಚಿಸಲು 2022-23 ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಘೋಷಿಸಲು ತಮ್ಮಲ್ಲಿ ಕೋರುತ್ತೇನೆ ಎಂದು ಯಡಿಯೂರಪ್ಪ ಪತ್ರದ ಮೂಲಕ ಸಿಎಂಗೆ ಮನವಿ ಮಾಡಿದ್ದಾರೆ.