ಬೆಂಗಳೂರು: ರಾಜ್ಯ ಸರ್ಕಾರ ಇಂದಿನಿಂದ ಕಠಿಣ ನಿಯಮ ಜಾರಿಗೊಳಿಸಿದ್ದು, ಮೇ.4 ರವರೆಗೆ ಶಾಲಾ - ಕಾಲೇಜುಗಳಿಗೆ ಕಡ್ಡಾಯ ರಜೆ ಘೋಷಿಸಲಾಗಿದೆ. ಈ ಹಿನ್ನೆಲೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಿಕೆಗಾಗಿ ಬೆಂಗಳೂರು ಸೇರಿದ್ದ ವಿದ್ಯಾರ್ಥಿಗಳು ಹಾಸ್ಟೆಲ್, ಪಿಜಿ ತೊರೆದು ಊರಿನತ್ತ ಮುಖ ಮಾಡಿದ್ದಾರೆ.
ಇಂದು ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಸಾಕಷ್ಟು ಪ್ರಯಾಣಿಕರು ಊರಿಗೆ ತೆರಳಲು ಸಜ್ಜಾಗಿ ನಿಂತಿದ್ದರು. ಇದಲ್ಲದೇ ಕಳೆದ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ಲಾಕ್ಡೌನ್ ಘೋಷಣೆಯಾಗಬಹುದೆಂಬ ಗೊಂದಲದಲ್ಲಿ ಹಲವಾರು ಕಾರ್ಮಿಕರು ಸಹ ಕುಟುಂಬ ಸಮೇತ ನಗರ ತೊರೆದಿದ್ದಾರೆ.
ಈ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಬಿಹಾರ, ಒಡಿಶಾ, ಪ.ಬಂಗಾಳ, ಆಂಧ್ರಪ್ರದೇಶ, ಜಾರ್ಖಂಡ್ ಮೂಲದವರೇ ಹೆಚ್ಚಿದ್ದರು. ಜೊತೆಗೆ ಉ.ಕರ್ನಾಟಕದ ಯಾದಗಿರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಹುಬ್ಬಳ್ಳಿ ಧಾರವಾಡದ ಜನ ಗಂಟುಮೂಟೆ ಸಹಿತ ತವರಿನತ್ತ ಹೋದರು.
ಇದಲ್ಲದೇ ಕೋವಿಡ್ ಭೀತಿ ಹೆಚ್ಚಿರುವ ಕಾರಣ ನಿರ್ಮಾಣ ಹಂತದ ಕಾಮಗಾರಿಗಳು ನಿಧಾನವಾಗಿದ್ದು, ಹಲವೆಡೆ ಕೆಲಸಕಾರ್ಯಗಳು ಸ್ಥಗಿತಗೊಂಡಿವೆ. ಹೀಗಾಗಿ ಕಾರ್ಮಿಕರು ಊರು ತೊರೆದಿದ್ದಾರೆ. ಬಸ್ ಮುಷ್ಕರ ಇದ್ದಿದ್ದರಿಂದ ಹೆಚ್ಚಿನ ಜನ ರೈಲಿನಲ್ಲಿ ತೆರಳಿದ್ದಾರೆ.