ಬೆಂಗಳೂರು: ನೆನೆಗುದಿಗೆ ಬಿದ್ದಿದ್ದ ಬಿಬಿಎಂಪಿ ಚುನಾವಣೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ ಡಿ ಲಿಮಿಟೇಷನ್ ಪೂರ್ಣಗೊಳ್ಳದೆ ಬಿಬಿಎಂಪಿ ಚುನಾವಣೆ ಆಗುತ್ತಾ ಎನ್ನುವ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ. ಸುಮಾರು 2 ವರ್ಷದಿಂದ ಕೋವಿಡ್ ಹಾಗು ಮತ್ತಿತರ ಕಾರಣಗಳಿಂದ ಪಾಲಿಕೆ ಚುನಾವಣೆ ನಡೆಯಲಿಲ್ಲ. ಇದೀಗ ಸರ್ವೋಚ್ಛ ನ್ಯಾಯಾಲಯ ಮಧ್ಯಪ್ರದೇಶದ ಸ್ಥಳೀಯ ಚುನಾವಣೆಗೆ ಸಂಬಂಧಿಸಿ ನಡೆಸಿದ ಅರ್ಜಿ ವಿಚಾರಣೆ ವೇಳೆ ದೇಶದ ಎಲ್ಲ ಪಾಲಿಕೆಗಳ ಚುನಾವಣೆ ನಡೆಸಲು ಸೂಚಿಸಿದೆ.
2020ರ ಸೆಪ್ಟೆಂಬರ್ ಬಳಿಕ ಚುನಾವಣೆ ನಡೆಯಬೇಕಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಸರ್ಕಾರ ನೀಡಿರಲಿಲ್ಲ. ಕಳೆದ ವರ್ಷ ಪಾಲಿಕೆಯ ನಿರ್ಗಮಿತ ವಿರೋಧ ಪಕ್ಷದ ಸದಸ್ಯರು ಸುಪ್ರೀಂಕೋರ್ಟ್‌ಗೆ ಶೀಘ್ರವೇ ಚುನಾವಣೆ ನಡೆಸುವಂತೆ ಅರ್ಜಿ ಸಲ್ಲಿಸಿದ್ದರು. ಈ ತಿಂಗಳ 21ರಂದು ಅರ್ಜಿ ವಿಚಾರಣೆಗೆ ಬರುವ ಸಂಭವವಿದೆ. ಇದೀಗ ಸುಪ್ರೀಂಕೋರ್ಟ್ ನೀಡಿದ ಆದೇಶ ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ಸಲ್ಲಿಸಲಾದ ಅರ್ಜಿಗೆ ಪೂರಕವಾಗಿ ಪರಿಣಮಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ಚುನಾವಣೆಗೆ ಪಾಲಿಕೆ ಸಕಲ ರೀತಿಯಲ್ಲೂ ಸಿದ್ಧ: ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಡಿ ಲಿಮಿಟೇಷನ್ ಗೊಂದಲ: 198 ವಾರ್ಡ್ ಇದ್ದ ಬಿಬಿಎಂಪಿ ವ್ಯಾಪ್ತಿಯನ್ನು ವಿಸ್ತರಿಸಿ 243 ಮಾಡುವ ಉದ್ದೇಶ ಹೊಂದಿದ್ದ ರಾಜ್ಯ ಸರ್ಕಾರ ವಾರ್ಡ್ ಮರು ವಿಂಗಡಣೆಗೆ ಮುಂದಾಗಿತ್ತು. ಇದೀಗ ಮೀಸಲಾತಿ ಸೇರಿದಂತೆ ಹಲವು ಪ್ರಕ್ರಿಯೆ ಪೂರ್ಣವಾಗದಿದ್ದರೂ ಚುನಾವಣೆಯ ಸಂಬಂಧ ಕೋರ್ಟ್ ಆದೇಶ ಗೊಂದಲಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಕೆಲ ಹಳ್ಳಿಗಳು ಅತಂತ್ರ: ಬೆಂಗಳೂರು ನಗರ ಜಿಲ್ಲೆಯ ಕೆಲ ಹಳ್ಳಿಗಳನ್ನು ಪಾಲಿಕೆಗೆ ಸೇರಿಸುವ ನಿಟ್ಟಿನಲ್ಲಿ ಪಂಚಾಯಿತಿ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಇದೀಗ ಡಿ ಲಿಮಿಟೇಷನ್ ನಡೆಯದೇ 198 ವಾರ್ಡ್‌ಗಳಿಗೆ ಮಾತ್ರ ಸೀಮಿತವಾದರೆ 110 ಹಳ್ಳಿಗಳ ಪೈಕಿ ಕೆಲ ಹಳ್ಳಿಗಳು ಅತಂತ್ರವಾಗಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆ ಕುರಿತು ರಾಜ್ಯ ಚುನಾವಣಾ ಆಯೋಗದ ನಿರ್ಧಾರಕ್ಕೆ ಬದ್ದ: ಸಿಎಂ ಬೊಮ್ಮಾಯಿ
'ಹಳ್ಳಿಗಳನ್ನು ಅತಂತ್ರವಾಗಲು ಬಿಡುವುದಿಲ್ಲ': ಡಿ ಲಿಮಿಟೇಷನ್ ಕಮಿಟಿಯ ಚೇರ್ಮನ್ ಆಗಿರುವ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಹಳ್ಳಿಗಳನ್ನು ಅಂತತ್ರವಾಗಲು ಬಿಡುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಏನಿದು ಗೊಂದಲ?: ಪಾಲಿಕೆಗೆ ಚುನಾವಣೆ ಯಾವಾಗ ಎಂಬ ಕುತೂಹಲ ತಣಿಯಬೇಕಾದರೆ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದ ಮುಂದೆ ಬಾಕಿ ಇರುವ ಪ್ರಕರಣದ ತೀರ್ಪು ಹೊರಬರಲೇಬೇಕಿದೆ. 198 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕೆಂದು 2020ರ ಡಿ. 4ರಂದು ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಡಿ. 18ರಂದು ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆ ತೆರವಾಗದ ಹೊರತು ತಾಂತ್ರಿಕವಾಗಿ ಪಾಲಿಕೆಗೆ ಚುನಾವಣೆ ನಡೆಸಲು ಸಾಧ್ಯವೇ ಇಲ್ಲ.
ಬಿಬಿಎಂಪಿಯಲ್ಲಿ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿಯು 2020ರ ಸೆ. 10ಕ್ಕೆ ಅಂತ್ಯಗೊಂಡಿತು. ಆದರೆ, ರಾಜ್ಯ ಸರಕಾರ ಚುನಾವಣೆ ನಡೆಸಲು ಒಲವು ತೋರಲಿಲ್ಲ. ಹೀಗಾಗಿ, ಚುನಾವಣೆ ವಿಳಂಬ ಪ್ರಶ್ನಿಸಿ, ಕಾಂಗ್ರೆಸ್ ಮುಖಂಡರಾದ ಎಂ.ಶಿವರಾಜು ಹಾಗೂ ಅಬ್ದುಲ್ ವಾಜೀದ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಸರಕಾರ 1976ರ ಕೆಎಂಸಿ ಕಾಯಿದೆಗೆ ತಿದ್ದುಪಡಿ ತಂದು, ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 243ಕ್ಕೆ ಹೆಚ್ಚಿಸಿತು. ಬಿಬಿಎಂಪಿ ಕಾಯಿದೆಯನ್ನೂ ಜಾರಿಗೆ ತಂದಿತು. ಇದನ್ನು ಮಾನ್ಯ ಮಾಡದ ಹೈಕೋರ್ಟ್, 198 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕೆಂದು 2020ರ ಡಿ. 4ರಂದು ಆದೇಶಿಸಿದೆ.
ರಾಜ್ಯ ಸರಕಾರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ 2020ರ ಡಿ. 10ರಂದು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇದನ್ನು ಆಲಿಸಿದ ನ್ಯಾಯಾಲಯವು ಹೈಕೋರ್ಟ್ ಆದೇಶಕ್ಕೆ 2020ರ ಡಿ. 18ರಂದು ತಡೆಯಾಜ್ಞೆ ನೀಡಿದ್ದು, ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇದೆ. ಸರಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿಯು ಇತ್ತೀಚೆಗೆ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಮತ್ತು ನ್ಯಾ.ಎ.ಎಸ್.ಓಕ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಆಗ ನ್ಯಾ.ಎ.ಎಸ್.ಓಕ್ ತಾವು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಪ್ರಕಟಿಸಿದರು.