ಬೆಂಗಳೂರು: ಜ್ಞಾನ ಅನ್ನೋದು ಶಕ್ತಿಯಾಗಿದೆ. ಪುಸ್ತಕಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ಜ್ಞಾನ ಎಲ್ಲರಿಗೂ ಸಮಾನವಾಗಿ ದೊರಕುವಂತೆ ಮಾಡಬೇಕಿದೆ ಎಂದು ಕೇಂದ್ರ ಸರ್ಕಾರದ ವಿಜ್ಞಾನ ಸಲಹೆಗಾರ ಕೆ.ವಿಜಯ್ ರಾಘವನ್ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅಭಿಪ್ರಾಯಪಟ್ಟರು.
ಜ್ಞಾನ ಸಂಪತ್ತು ಇವತ್ತು ಕೇವಲ ಆಯ್ದ ಕಾಲೇಜು ಅಥವಾ ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮಿತವಾಗಿದೆ. ಮೊದಲಿಗೆ ವಿಶ್ವವಿದ್ಯಾಲಯದಲ್ಲಿ ಇರುವ ಎಲ್ಲಾ ಪುಸ್ತಕಗಳನ್ನು ಡಿಜಿಟಲೀಕರಣ ಮಾಡಬೇಕು ಹಾಗೂ ಎಲ್ಲಾ ಭಾಷೆಗೆ ಅನುವಾದ ಮಾಡಲು ಅವಕಾಶ ನೀಡಬೇಕು. ಡಿಜಿಟಲೀಕರಣ ಮಾಡಿದರೆ, ಎಲ್ಲರಿಗೆ ಜ್ಞಾನ ದೊರಕುತ್ತದೆ. ಭಾರತದ ಎಲ್ಲಾ ವಿಶ್ವವಿದ್ಯಾಲಯ ಹಾಗೂ ವಿದ್ಯಾಸಂಸ್ಥೆಗಳೂ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಕೆಲಸಕ್ಕೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದ್ರು.
ಸಮೋಸದಿಂದ ಜಿಲೇಬಿ ಆಗೋಣ:
ಈಗ ಸಮಾಜದಲ್ಲಿ ಎಲ್ಲರೂ ಸಮೋಸ ಮೇಲೆ ಸಮೋಸ ಜೋಡಿಸಿದ ಹಾಗೆ ಇದ್ದೀವಿ. ಕೆಳಗೆ ಇರುವ ಸಮೋಸ ಮೇಲೆ ಬರಲು ಅಸಾಧ್ಯ. ಕೇವಲ ಕೆಲವು ಸಮೋಸ ಮಾತ್ರ ಪ್ರತ್ಯೇಕವಾಗಿ ನಿಲ್ಲುತ್ತವೆ. ಅದೇ ಜಿಲೇಬಿ ಆದರೆ ಸುತ್ತು ಸುತ್ತು ಹೊಡೆದು ಒಂದರ ಮೇಲೋಂದು ಅಂಟಿಕೊಂಡಿರುತ್ತದೆ. ಇದರಿಂದ ಜ್ಞಾನ ಹಂಚಿಕೊಳ್ಳಬಹುದು. ಬಡವರು ಜ್ಞಾನದಿಂದ ಹಿಂದೆ ಉಳಿದಿದ್ದು ಅವರಿಗೆ ಜ್ಞಾನ ದೊರಕುವಂತಾಗಬೇಕು ಎಂದು ಹೇಳಿದ್ರು.
ಬಹುಭಾಷಾ ಜರ್ನಲ್ಗಳು ಕೇವಲ ವಿಶ್ವವಿದ್ಯಾಲಯಕ್ಕೆ ಸೀಮಿತವಾಗದೆ, ಎಲ್ಲರಿಗೂ ಮುಕ್ತವಾಗಿ ಲಭ್ಯವಾಗಬೇಕೆಂದು ಕೇಂದ್ರ ಸರ್ಕಾರ ನಿರಂತರ ಪ್ರಯತ್ನಿಸುತ್ತಿದೆ. ವಿಕಿಪಿಡಿಯಾದಲ್ಲಿ ಸ್ಥಳೀಯ ಭಾಷೆಗಳ ಮಾಹಿತಿ ಅತೀ ಕಳಪೆ ಮಟ್ಟದಲ್ಲಿದೆ. ಅದೇ ಇಂಗ್ಲಿಷ್ ಹಾಗೂ ಇನ್ನಿತರ ಭಾಷೆಯಲ್ಲಿ ಉತ್ತಮವಾಗಿದೆ ಎಂದರು.
ಸಂಶೋಧನೆ ಹಾಗೂ ಟೀಚಿಂಗ್ ಒಟ್ಟಿಗೆ ನಡೆಯಬೇಕು:
ಸಂಶೋಧನೆ ಹಾಗೂ ಬೋಧನೆ ಒಟ್ಟಿಗೆ ಇರಬೇಕು. ಪಿಹೆಚ್ಡಿ ವಿದ್ಯಾರ್ಥಿಗಳ ವಿಪರ್ಯಾಸ ಅಂದರೆ, ಪ್ರಸ್ತುತವಾಗಿ ಕೇವಲ ಸಂಶೋಧನೆ ಮಾಡುತ್ತಾರೆ. ಇಲ್ಲವಾದಲ್ಲಿ ಕೇವಲ ಬೋಧನೆ ಮಾಡುತ್ತಾರೆ. ಯಾವಾಗ ಈ ಎರಡು ಅಂಶಗಳನ್ನು ಒಟ್ಟಿಗೆ ಮಾಡುತ್ತಾರೋ ಆಗ ಮಾತ್ರ ಉತ್ತಮ ಆವಿಷ್ಕಾರ ಆಗುತ್ತೆ ಎಂದರು.