ಬೆಂಗಳೂರು: ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಪಾದಯಾತ್ರೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಕಾಂಗ್ರೆಸ್ ನಾಯಕರಿಗೆ ನೋಟಿಸ್ ನೀಡಲಾಗಿದ್ದು ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್.ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಯ ಡಿಪಿಆರ್ ಮಾಡಲು ನಾಲ್ಕು ವರ್ಷ ಸಮಯ ತೆಗೆದುಕೊಂಡಿದ್ದಾರೆ. ಬೆಟ್ಟ ಅಗೆದು ಇಲಿ ತೆಗೆದಂತೆ ಮಾಡಿದ್ದಾರೆ. ಈಗ ಮೇಕೆದಾಟು ಯೋಜನೆ ಎಂದು ಪಾದಯಾತ್ರೆ ಮಾಡುತ್ತಿದ್ದಾರೆ. ಕೋವಿಡ್ ನಿಯಮ ಉಲ್ಲಂಘನೆ ಸಂಬಂಧ ಈಗಾಗಲೇ ಅವರಿಗೆಲ್ಲ ನೋಟಿಸ್ ಕೊಡಲಾಗಿದೆ. ನಮ್ಮ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಹೋಗಿ ಭೌತಿಕವಾಗಿಯೂ ನಿಯಮ ಉಲ್ಲಂಘನೆ ಕುರಿತು ಹೇಳಿದ್ದಾರೆ. ಆದರೂ ಅವರು ಉಡಾಫೆಯಿಂದ ಪಾದಯಾತ್ರೆ ಮಾಡುತ್ತಿದ್ದಾರೆ. ಅದಕ್ಕೆ ಕಾನೂನು ಪ್ರಕಾರ ಏನಾಗಬೇಕೋ ಆ ರೀತಿಯ ಕ್ರಮ ಕೈಗೊಳ್ಳುತ್ತೇವೆ ಎಂದರು.
'ರಾಜಕೀಯ ಪಾದಯಾತ್ರೆ'
ಕಾಂಗ್ರೆಸ್ನವರು ಪಾದಯಾತ್ರೆಯನ್ನು ಯಾವುದಕ್ಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರಿಗೆ ಬಂದಿದೆ. ಅವರೇ ಐದು ವರ್ಷ ಅಧಿಕಾರದಲ್ಲಿದ್ದರು. ಒಂದು ಡಿಪಿಆರ್ ಸರಿಯಾಗಿ ಸಲ್ಲಿಕೆ ಮಾಡಲು ಅವರಿಂದ ಆಗಿರಲಿಲ್ಲ. ಸಮ್ಮಿಶ್ರ ಸರ್ಕಾರ ಬಂದ ನಂತರ ಡಿಪಿಆರ್ ಸಲ್ಲಿಕೆಯಾಗಿದೆ.
ಅವರಿಗೆ ಯಾವುದೇ ಬದ್ಧತೆ ಇಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ನೀರಾವರಿ ಸಚಿವರಾಗಿದ್ದರು. ಅಂದು ಕೂಡ ಅವರು ಮೇಕೆದಾಟು ಯೋಜನೆ ಮುಂದುವರಿಸಲಿಲ್ಲ. ಕಳೆದ ಮೂರು ವರ್ಷ ಇದರ ಬಗ್ಗೆ ವಿಧಾನಸೌಧ ಸೇರಿ ಎಲ್ಲಿಯೂ ಚರ್ಚೆ ಮಾಡಿಲ್ಲ. ಈಗ ಚುನಾವಣಾ ಹತ್ತಿರ ಬಂದಿದೆ ಎಂದು ಏಕಾಏಕಿ ರಾಜಕೀಯ ಕಾರಣಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಸಿಎಂ ಟೀಕಿಸಿದರು.
'ಅಪರಾಧಿ ಮನೋಭಾವ ದೂರ ಮಾಡಿಕೊಳ್ಳಲು ಈ ಪಾದಯಾತ್ರೆ'
ತಾವು ಕೆಲಸ ಮಾಡಿಲ್ಲ ಎನ್ನುವ ಅಪರಾಧಿ ಮನೋಭಾವ ಈಗ ಅವರಿಗೆ ಕಾಡುತ್ತಿದೆ. ಅದನ್ನು ದೂರ ಮಾಡಿಕೊಳ್ಳಲು, ಜನರನ್ನು ಮರಳು ಮಾಡಲು ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಸಂಪೂರ್ಣವಾಗಿ ಕಾಂಗ್ರೆಸ್ ರಾಜಕೀಯ ಪಾದಯಾತ್ರೆಯೇ ಹೊರತು ನೀರಾವರಿ ಯೋಜನೆಯ ಪಾದಯಾತ್ರೆ ಅಲ್ಲ.
ಈ ಹಿಂದೆ ಕೃಷ್ಣಾ ಬಗ್ಗೆಯೂ ಪಾದಯಾತ್ರೆ ಮಾಡಿದರು, ಅದು ಏನಾಗಿದೆ? ಇದೇ ರೀತಿ ನೀರಿನಲ್ಲಿ ಹೋಗಿ ಆಣೆ ಮಾಡಿದರು. ಪ್ರತಿ ವರ್ಷ 10 ಸಾವಿರ ಕೋಟಿ ಕೊಡುತ್ತೇವೆ ಎಂದಿದ್ದರು. ಆದರೆ ಐದು ವರ್ಷದಲ್ಲಿ ಏಳು ಸಾವಿರ ಕೋಟಿಯನ್ನು ಕೊಡಲಿಲ್ಲ ಅವರು. ಕೇವಲ ಜನರನ್ನು ಮರಳು ಮಾಡಲು ಈ ರೀತಿಯ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ. ಜನರನ್ನು ಪದೇ ಪದೇ ಮರುಳು ಮಾಡಲು, ಎಲ್ಲರನ್ನೂ ಎಲ್ಲಾ ಸಂದರ್ಭದಲ್ಲಿಯೂ ಮೋಸ ಮಾಡಲು ಆಗಲ್ಲ ಎಂದು ವ್ಯಂಗ್ಯವಾಡಿದರು.
'ಯೋಜನೆ ಜಾರಿಗೆ ಸರ್ವ ಪ್ರಯತ್ನ'
ನಮ್ಮ ಸರ್ಕಾರ ಬಂದ ನಂತರ ಯೋಜನೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಹೋಗಿದೆ. ಯೋಜನೆಗಾಗಿ ಸಭೆ ನಡೆಯುತ್ತಿದೆ. ಸದ್ಯದಲ್ಲೇ ಅದರ ಬಗ್ಗೆ ತೀರ್ಮಾನ ಆಗಲಿದೆ. ಸುಪ್ರೀಂಕೋರ್ಟ್ನಲ್ಲೂ ಇದೇ ತಿಂಗಳಲ್ಲಿ ಕೇಸು ವಿಚಾರಣೆಗೆ ಬರಲಿದೆ. ಅದನ್ನು ಕೂಡ ನಾವು ಪರಿಹರಿಸುವ ಪ್ರಯತ್ನದಲ್ಲಿದ್ದೇವೆ. ಪರಿಸರ ಇಲಾಖೆ ಅನುಮತಿಗೂ ನಾವು ಪ್ರಯತ್ನಿಸುತ್ತಿದ್ದೇವೆ.
ಹಿಂದೆ ಕೇವಲ ರೈತರು ಹೋಗಿ ಮೆಕೆದಾಟು ಯೋಜನೆ ಸ್ಥಳಕ್ಕೆ ಭೇಟಿ ಕೊಟ್ಟಿದ್ದಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಇಡೀ ಯೊಜನೆಗೆ ತಡೆ ಕೊಟ್ಟಿತ್ತು. ಇವರು ಇಷ್ಟು ದೊಡ್ಡ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದರಿಂದ ಆಗುವ ಪರಿಣಾಮ ಏನು ಎನ್ನುವುದು ಅವರಿಗೆ ಗೊತ್ತಿದೆ. ಆದರೂ ಅವರಿಗೆ ರಾಜಕೀಯ ಬಹಳ ಮುಖ್ಯ. ಎನ್ಜಿಟಿಯ ತಡೆಯಾಜ್ಞೆ ತೆರವುಗೊಳಿಸಿ, ಆದೇಶವನ್ನು ರದ್ದು ಮಾಡಿಸಿದ್ದೇವೆ. ಅದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ.
ಈ ಹಿಂದೆ ಸರ್ಕಾರ ನಡೆಸಿರುವ ಈ ಪಕ್ಷ ಸದ್ಯ ವ್ಯವಸ್ಥೆ ಹೇಗಿದೆ? ಕಾನೂನು ಹೇಗಿದೆ? ಅಂತಾರಾಜ್ಯ ಜಲ ವಿವಾದ ಏನು? ಸುಪ್ರೀಂಕೋರ್ಟ್ ಆದೇಶಗಳು, ಕಾವೇರಿ ನ್ಯಾಯಾಧೀಕರಣದ ತೀರ್ಪು ಏನು? ಎನ್ನುವುದನ್ನು ಗಮನಿಸಿದ್ದರೆ ಈ ರೀತಿಯ ಪಾದಯಾತ್ರೆ ಆಗುತ್ತಿರಲಿಲ್ಲ. ಇದೆಲ್ಲಾ ಅವರಿಗೆ ಬೇಕಾಗಿಲ್ಲ. ರಾಜಕಾರಣ ಮಾತ್ರ ಬೇಕಾಗಿದೆ. ಜನರೇ ಎಲ್ಲವನ್ನೂ ತೀರ್ಮಾನ ಮಾಡಲಿದ್ದಾರೆ ಎಂದರು.
ಇದನ್ನೂ ಓದಿ: 'ಕರ್ಫ್ಯೂ ಉಲ್ಲಂಘಿಸಿ ಪಾದಯಾತ್ರೆ ಆರಂಭಿಸಿರುವ ಕಾಂಗ್ರೆಸ್ ನಾಯಕರ ವಿರುದ್ಧ ಜಿಲ್ಲಾಡಳಿತದಿಂದ ಕ್ರಮ'
ಪಕ್ಷದ ಪ್ರಮುಖರ ಮತ್ತು ಸಚಿವರ ಸಭೆ ಕರೆದಿದ್ದೇನೆ. ಹಲವಾರು ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಬೆಂಗಳೂರಿನ ಅಭಿವೃದ್ಧಿ ಬಗ್ಗೆಯೂ ಚರ್ಚೆ ನಡೆಯಲಿದೆ. ಮೇಕೆದಾಟು ಯೋಜನೆ ಬಗ್ಗೆಯೂ ಚರ್ಚೆ ಆಗಲಿದೆ. ಪಾದಯಾತ್ರೆ ಬಗ್ಗೆಯೂ ಚರ್ಚೆಯಾಗಲಿದೆ. ಅದರ ನಂತರ ವಿವರವಾಗಿ ನಮ್ಮ ಸಚಿವರು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಲಿದ್ದಾರೆ ಎಂದು ಸಿಎಂ ತಿಳಿಸಿದರು..