ಬೆಂಗಳೂರು: ಕೋವಿಡ್ ಸಾವಿನ ಸಂಖ್ಯೆ ಮುಚ್ಚಿಟ್ಟ ಆರೋಪ ವಿಚಾರವಾಗಿ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ಟೀಕಾಸ್ತ್ರ ಹರಿ ಬಿಟ್ಟಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ಈಶ್ವರ್ ಖಂಡ್ರೆ, ನಾವು ಪ್ರತಿದಿನ ಈ ಬಗ್ಗೆ ಹೇಳ್ತಿದ್ದೆವು. ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಪದೇ ಪದೆ ಹೇಳುತ್ತಿದ್ದೆವು. ಈಗ ಡಬ್ಲ್ಯೂಹೆಚ್ಒ ವರದಿ ಕೊಟ್ಟಿದೆ. ಈಗ ಪ್ರಧಾನಿಯವರು ಕ್ಷಮೆ ಯಾಚಿಸಬೇಕು ಎಂದಿದ್ದಾರೆ.
47ಲಕ್ಷ ಜನರ ಸಾವಿಗೆ ಸರ್ಕಾರವೇ ಕಾರಣ. ಸರ್ಕಾರದ ನಿರ್ಲಕ್ಷ್ಯದಿಂದ 36 ಜನ ಸತ್ರು. ಬೀದರ್ನಲ್ಲಿ ಆಕ್ಸಿಜನ್ ಇಲ್ಲದೆ 56 ಜನ ಸತ್ರು. ಕೋವಿಡ್ನಿಂದ ಹೆಚ್ಚಿನ ಜನ ಮೃತಪಟ್ಟರು. ಈಗ ಬಿಜೆಪಿ ಬಣ್ಣ ಬಯಲಾಗಿದೆ ಎಂದು ಕಿಡಿ ಕಾರಿದರು. ಯಾರು ಸುಳ್ಳು ಹೇಳ್ತಾರೆ ಅವರ ಮೇಲೆ ಕೇಸ್ ಹಾಕಬೇಕು. ಮಾಸ್ಕ್ ಹಾಕದವರ ಮೇಲೆ ಕೇಸ್ ಹಾಕಿದ್ದಾರೆ. ಹೋರಾಟ ಮಾಡಿದ ಮೇಲೆ ನಮ್ಮಮೇಲೆ ಕೇಸ್ ಹಾಕಿದ್ದಾರೆ. ಈಗ ಇವರು ಜನರಿಗೆ ಸುಳ್ಳು ಹೇಳಿದ್ದಾರೆ. ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ರಾಮಲಿಂಗಾ ರೆಡ್ಡಿ ಕಿಡಿ: ನಾನು ಕೋವಿಡ್ ಡೆತ್ ಬಗ್ಗೆ ಪ್ರಶ್ನೆ ಕೇಳಿದ್ದೆ. ಅಂಕಿ ಅಂಶಗಳ ಸಮೇತ ಸಾವಿನ ಸಂಖ್ಯೆ ಎತ್ತಿದ್ದೆ. ಕೋವಿಡ್ ಸಾವಿನ ಸಂಖ್ಯೆ ಮುಚ್ಚಿಟ್ಟಿದ್ದರು. ಈಗ ಡಬ್ಲ್ಯೂಹೆಚ್ಒನವರು ವರದಿ ಕೊಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳದ ವರದಿ ಕೊಟ್ಟಿದ್ದಾರೆ. ಇವರು ಸಾವಿನ ಸಂಖ್ಯೆ ಕಡಿಮೆ ನೀಡಿದ್ದರು ಎಂದು ರಾಮಲಿಂಗಾ ರೆಡ್ಡಿ ಆರೋಪಿಸಿದರು.
ನಾನು 42 ಲಕ್ಷ ಜನ ಸಾವನ್ನಪ್ಪಿದ್ದಾರೆ ಎಂದಿದ್ದೆ. ವರದಿಯಲ್ಲಿ 47 ಲಕ್ಷ ಜನ ಸತ್ತಿದ್ದಾರೆಂದಿದ್ದೆ. ಕೇಂದ್ರ ಸರ್ಕಾರ ಈಗ ಏನು ಹೇಳುತ್ತದೆ. 2019ಕ್ಕೆ ಹೋಲಿಕೆ ಮಾಡಿದರೆ 2021ರಲ್ಲಿ ಹೆಚ್ಚು ಸಾವನ್ನಪ್ಪಿದ್ದಾರೆ. ಒಂದೆರಡು ಮಾಧ್ಯಮ ಬಿಟ್ಟರೆ ಎಲ್ಲರೂ ವರದಿ ಮಾಡಿದ್ದಾರೆ. ಕೋವಿಡ್ ಸಮರ್ಥವಾಗಿ ಎದುರಿಸಿದ್ದೇವೆ ಎಂದಿದ್ದರು, ಜಂಭ ಕೊಚ್ಚಿಕೊಳ್ಳುತ್ತಿದ್ದರು. ಯಾವ ಸಾಂಕ್ರಾಮಿಕ ರೋಗದ ವೇಳೆಯೂ ಇಷ್ಟು ಸಾವಾಗಿರಲಿಲ್ಲ.
ವರದಿ ಸರಿಯಿಲ್ಲವೆಂದು ಬಿಜೆಪಿ ಹೇಳುತ್ತಿದೆ. ಶುಗರ್ ಇದ್ರೆ ಕೊರೊನಾ ಸರ್ಟಿಫಿಕೆಟ್ ಕೊಡಲ್ಲ. ಸ್ಮೋಕಿಂಗ್ ಇದ್ರೆ ಡೆತ್ ಸರ್ಟಿಪಿಕೆಟ್ ಕೊಡಲ್ಲ. ಹೃದ್ರೋಗಿಗಳಿಗೆ ಕೊರೊನಾ ಬಂದ್ರೆ ಸರ್ಟಿಫಿಕೆಟ್ ಕೊಡಲ್ಲ. ಕೊರೊನಾದಿಂದ ಬೇರೆ ರೋಗ ಇದ್ದವರು ಸತ್ರೆ ಮುಚ್ಚಿಡುತ್ತಿದ್ದರು ಎಂದು ಆರೋಪಿಸಿದರು.
ಕೋವಿಡ್ನಲ್ಲಿ ಸಾವಿನ ಸುಳ್ಳು ಲೆಕ್ಕ: ಕೋವಿಡ್ನಲ್ಲಿ ಸಾವಿನ ಸುಳ್ಳು ಲೆಕ್ಕ ಕೊಟ್ಟು ಜಗತ್ತಿನ ಕಣ್ಣಿಗೆ ಮಣ್ಣೆರೆಚಿದ್ದ, ಕೇಂದ್ರದ ಸುಳ್ಳಿನ ಬಂಡವಾಳ ಬೆತ್ತಲಾಗಿದೆ ಎಂದು ದಿನೇಶ್ ಗಂಡೂರಾವ್ ಕಿಡಿ ಕಾರಿದ್ದಾರೆ. WHO ವರದಿಯಿಂದ ಬಯಲಾಗಿದೆ. ಕೋವಿಡ್ನಲ್ಲಿ 47 ಲಕ್ಷ ಜನ ಮೃತರಾಗಿದ್ದಾರೆ. ಆದರೆ ಕೇಂದ್ರ 4.8 ಲಕ್ಷ ಎಂದು ದಾರಿ ತಪ್ಪಿಸಿತ್ತು. 2ನೇ ಅಲೆಯಲ್ಲಿ ಭಾರತ ಸಾವಿನ ಮನೆಯಾಗಿತ್ತು.
ಗಂಗೆಯಲ್ಲಿ ಶವಗಳು ತೇಲಿದ್ದವು. ಆಕ್ಸಿಜನ್ ಇಲ್ಲದೇ ಸಾಲು ಸಾಲು ಹೆಣ ಬಿದ್ದವು. ಜನದೀಪದ ಹುಳುಗಳಂತೆ ಸಾಯುತ್ತಿದ್ದರು. ಮೋದಿ ಕೊರೊನಾ ಗೆದ್ದಿದ್ದೇವೆಂದು ಬಿಟ್ಟಿ ಪ್ರಚಾರ ಮಾಡಿದ್ದರು. ಈ ಮೂಲಕ ಸಾವಿನ ಲೆಕ್ಕ ಮರೆಮಾಚಿದ್ದರು. ಈಗ WHO ವರದಿ ಸರ್ಕಾರದ ಸತ್ಯ ದರ್ಶನ ಮಾಡಿಸಿದೆ. ಸತ್ತವರ ಶಾಪ ತಟ್ಟದೆ ಇರಲಾರದು. ಸುಳ್ಳು ಹೇಳಿ ಸತ್ಯ ಮುಚ್ಚಿಡೋಕೆ ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಲೀಂ ಅಹಮ್ಮದ್ ವಾಗ್ದಾಳಿ: ಇದೇ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ, ಕೋವಿಡ್ನಿಂದ ಲಕ್ಷಾಂತರ ಜನ ಸತ್ತರು. ಸುಳ್ಳು ಹೇಳಿ ಕೇಂದ್ರ ಸರ್ಕಾರ ಮರೆಮಾಚಿತ್ತು. ಈಗ WHO ವರದಿಯನ್ನು ಕೊಟ್ಟಿದೆ. ಆ ವರದಿಯನ್ನು ಒಪ್ಪೋಕೆ ಸರ್ಕಾರಕ್ಕೆ ಹಿಂದೇಟು ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಪಿಎಸ್ಐ ಅಕ್ರಮದಲ್ಲಿ ಕಾನ್ಸ್ಟೇಬಲ್ನಿಂದ ಹಿಡಿದು ಡಿವೈಎಸ್ಪಿಯವರೆಗೆ ಒಳಗೆ ಹಾಕಿದ್ದೇವೆ: ಸಚಿವ ಕಾರಜೋಳ