ಬೆಂಗಳೂರು : ಗದ್ದಲದ ನಡುವೆ ನಿನ್ನೆ ವಿಧಾನಸಭೆಯಲ್ಲಿ ಅನುಮೋದನೆಗೊಂಡಿರುವ ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕ ವಿಧಾನಪರಿಷತ್‌ನಲ್ಲಿ ಮಂಡನೆಯಾಗಲಿದೆ. ಈ ಹಿನ್ನೆಲೆ ಎಲ್ಲಾ ಬಿಜೆಪಿ ಸದಸ್ಯರು ಸದನದಲ್ಲಿ ಕಡ್ಡಾಯವಾಗಿ ಹಾಜರಾತಿಗಾಗಿ ಪಕ್ಷದ ವತಿಯಿಂದ ವಿಪ್ ಜಾರಿ ಮಾಡಿದೆ.
ಚಾಣಕ್ಯ ವಿಶ್ವವಿದ್ಯಾಲಯದ ವಿಧೇಯಕ ಹಾಗೂ ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ವಿಧೇಯಕ ಪರಿಷತ್‌ನಲ್ಲಿ ಮಂಡನೆ ಹಿನ್ನೆಲೆ ವಿಪ್ ಜಾರಿಗೊಳಿಸಲಾಗಿದೆ. ಎಲ್ಲಾ ಸದಸ್ಯರು ಕಡ್ಡಾಯವಾಗಿ ಹಾಜರಿರುವಂತೆ ತಿಳಿಸಲಾಗಿದೆ.
ನಿನ್ನೆ ಸಂಜೆ ವಿಧಾನಸಭೆಯಲ್ಲಿ ಬಿಲ್ ಮಂಡನೆಯಾದ ಸಂದರ್ಭ ಪ್ರತಿಪಕ್ಷ ಸದಸ್ಯರು ತೀವ್ರ ಪ್ರತಿರೋಧ ಒಡ್ಡಿದ್ದರು. ಧ್ವನಿಮತದ ಮೂಲಕ ರಾತ್ರಿ ವಿಧಾನಸಭೆಯಲ್ಲಿ ಮಂಡನೆಯಾದ ಮಸೂದೆ ಇಂದು ಪರಿಷತ್‌ನಲ್ಲಿ ಮಂಡನೆಯಾಗಲಿದೆ. ವಿಧಾನ ಪರಿಷತ್‌ನಲ್ಲಿ ಈ ಮಸೂದೆಯನ್ನು ವಿರೋಧಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಪರಿಷತ್ ಸದಸ್ಯರಿಗೆ ಈಗಾಗಲೇ ಸೂಚನೆ ನೀಡಿದ್ದಾರೆ.
ಇಂದು ಬೆಳಗ್ಗೆ ಸಹ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸರ್ಕಾರದ ಕ್ರಮ ಖಂಡಿಸಿದ್ದರು. ಕಾಂಗ್ರೆಸ್ ವಿರೋಧಕ್ಕೆ ಕಾರಣವಾಗಿರುವ ಮಹತ್ವದ ಮಸೂದೆ ಪರಿಷತ್‌ನಲ್ಲಿ ಮಂಡನೆ ಆಗಲಿದೆ. ಈ ಹಿನ್ನೆಲೆ ಬಿಜೆಪಿ ತಮ್ಮ ಸದಸ್ಯರಿಗೆ ವಿಪ್ ಜಾರಿ ಮಾಡಿದೆ.