ಬೆಂಗಳೂರು: ನಗರದಲ್ಲಿ ದಿನೇ ದಿನೆ ಏರುತ್ತಿರುವ ಖಾಸಗಿ ವಾಹನಗಳ ಸಂಖ್ಯೆ ನಿಯಂತ್ರಿಸಲು ವಾಣಿಜ್ಯ ಪ್ರದೇಶಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಈಗಾಗಲೇ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ರೂಪಿಸಿರುವ ಹೊಸ ಮಾದರಿಯ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರುವುದು ಕಡ್ಡಾಯವಾಗಿದೆ. ವಾಹನಗಳ ಸಂಖ್ಯೆ ಪ್ರತಿ ಇಬ್ಬರಿಗೆ ಒಂದು ವಾಹನದಂತೆ 86.6 ಲಕ್ಷಕ್ಕೆ ಏರಿಕೆಯಾಗಿದೆ.
ಡಲ್ಟ್ ನೀಡಿರುವ ಪಾರ್ಕಿಂಗ್ ನೀತಿಯನ್ನು ಮತ್ತೆ ಸಮಗ್ರವಾಗಿ ಪರಿಶೀಲಿಸಿ ವರದಿ ನೀಡಲು ಸರ್ಕಾರ ಸೂಚಿಸಿದೆ. ಇದರ ಅನುಷ್ಠಾನದಲ್ಲಿ ಇನ್ನಷ್ಟು ವಿಳಂಬವಾಗಲಿದೆ. ಈಗಾಗಲೇ ನಗರದ ವಾಣಿಜ್ಯ ಪ್ರದೇಶಗಳಾದ ಮೆಜೆಸ್ಟಿಕ್, ಶಿವಾಜಿನಗರ, ಜಯನಗರ, ಗಾಂಧಿನಗರ ಸೇರಿದಂತೆ ಅನೇಕ ಕಡೆ ದ್ವಿಚಕ್ರ ವಾಹನ, ಕಾರುಗಳ ನಿಲುಗಡೆಗೆ ಸ್ಥಳದ ಕೊರತೆ ಎದುರಾಗಿದೆ. ಗಾಂಧಿನಗರದ ಸ್ವಾತಂತ್ರ್ಯ ಉದ್ಯಾನದ (ಫ್ರೀಡಂ ಪಾರ್ಕ್) ಬಳಿ ಬಿಬಿಎಂಪಿ ನಿರ್ಮಿಸುತ್ತಿರುವ ಬಹುಮಹಡಿ ಪಾರ್ಕಿಂಗ್ ಕಟ್ಟಡವೂ ಮೂರ್ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.
ಸ್ಮಾರ್ಟ್ ಪಾರ್ಕಿಂಗ್: ಪ್ರಮುಖ ಹತ್ತು ವಾಣಿಜ್ಯ ಪ್ರದೇಶಗಳಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಹಣ ಪಾವತಿಸಿ ಸವಾರರು ತಮ್ಮ ವಾಹನಗಳ ಪಾರ್ಕಿಂಗ್ ಮಾಡಬಹುದು. ಇದರಿಂದ ಪಾಲಿಕೆಗೂ ವಾರ್ಷಿಕ ₹31.56 ಕೋಟಿ ಆದಾಯ ನಿರೀಕ್ಷಿಸಲಾಗಿದೆ.
ಕನ್ನಿಂಗ್ ಹ್ಯಾಮ್ ರಸ್ತೆ, ಎಂ.ಜಿ.ರಸ್ತೆ, ಕಸ್ತೂರ್ ಬಾ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ಕ್ರಾಸ್ ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಅಲಿ ಆಸ್ಕರ್ ರಸ್ತೆಯಲ್ಲಿ ಸ್ಮಾರ್ಟ್ ಪಾರ್ಕಿಂಗ್ ಜಾರಿಯಾಗಿದ್ದು, ನಗರದ ವಿವಿಧ 84 ರಸ್ತೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬಿಬಿಎಂಪಿ ಟೆಂಡರ್ ನೀಡಿದೆ. ಆದರೆ, ಸಾರ್ವಜನಿಕರು ಪಾರ್ಕಿಂಗ್ ಶುಲ್ಕ ನೀಡಲು ಹಿಂದೇಟು ಹಾಕಿ ನಗರದಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುವುದು ಮುಂದುವರೆದಿದೆ.
ಇನ್ನು ಶಿವಾಜಿನಗರ ಮತ್ತು ಜಯನಗರ ಮಾರುಕಟ್ಟೆಗಳಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸುತ್ತಿದ್ದು, ಇದು ಪಾಲಿಕೆ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದೆ. ಇತ್ತ ಪ್ರಯಾಣಿಕರಿಂದಲೂ ಸುಲಿಗೆ ಮಾಡಲಾಗುತ್ತಿದೆ. ಸಾರ್ವಜನಿಕ ವಾಹನದಲ್ಲೇ ಓಡಾಟ ಹೆಚ್ಚಿಸಲು ಪ್ರಮುಖ ಪ್ರದೇಶಗಳಾದ ಶಿವಾಜಿನಗರ, ಕೋರಮಂಗಲ ಕಡೆಗಳಿಗೂ ಮೆಟ್ರೋ ರೈಲು ಯೋಜನೆ ವಿಸ್ತರಿಸಲಾಗುತ್ತಿದೆ.
![Where to park the vehicle on the busy commercial roads of the city](https://etvbharatimages.akamaized.net/etvbharat/prod-images/10046134_pppp.png)
ಹೀಗಾಗಿ ನಗರದಲ್ಲಿ ಸ್ಮಾರ್ಟ್ ಪಾರ್ಕಿಂಗ್ ಅಥವಾ ಹಣ ಪಾವತಿಸುವ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತಂದು ದ್ವಿಚಕ್ರ ವಾಹನಗಳ ಒಂದು ಗಂಟೆ ಅವಧಿಯ ನಿಲುಗಡೆಗೆ ₹30, ಕಾರುಗಳಿಗೆ ₹60, ಗರಿಷ್ಠ 8 ಗಂಟೆ ಅವಧಿಗೆ ದ್ವಿಚಕ್ರ ವಾಹನಕ್ಕೆ ₹750, ಕಾರುಗಳಿಗೆ ₹1500 ಶುಲ್ಕ ಏರಿಕೆಗೆ ಡಲ್ಟ್ ನಿಯಮ ರೂಪಿಸಿದೆ. ಆದರೆ, ಪಾಲಿಕೆ ಚುನಾವಣೆ ಹೊಸ್ತಿಲಲ್ಲಿ ಈ ಹೊಸ ಪಾರ್ಕಿಂಗ್ ಜಾರಿಯೂ ಅನುಮಾನ ಎನ್ನಲಾಗ್ತಿದೆ.
![Where to park the vehicle on the busy commercial roads of the city](https://etvbharatimages.akamaized.net/etvbharat/prod-images/10046134_ttt.png)
ವಾಹನ ಪಾರ್ಕಿಂಗ್ ಸಮಸ್ಯೆ, ಅಧಿಕ ಪಾರ್ಕಿಂಗ್ ಶುಲ್ಕ ವಸೂಲಿ ಕುರಿತು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಮಾತನಾಡಿ, ಸರ್ಕಾರಗಳು ಮಾಡುವ ಬಹುತೇಕ ಯೋಜನೆಗಳು ಸಾರ್ವಜನಿಕರಿಗೆ ಅನುಕೂಲ ಆಗುವ ಬಗ್ಗೆ ಯೋಚಿಸುತ್ತಿಲ್ಲ. ತಮಗೇನು ಲಾಭ ಎಂಬುದನ್ನೇ ಪ್ರಮುಖವಾಗಿ ನೋಡುತ್ತಿವೆ. ಜೆ.ಸಿ ರಸ್ತೆ, ಕೆ.ಜಿ ರಸ್ತೆಗಳಲ್ಲಿ ಖಾಸಗಿ ವ್ಯಕ್ತಿಗಳು ಪಾರ್ಕಿಂಗ್ ಸ್ಥಳ ಅಕ್ರಮವಾಗಿ ಮಾಡಿ ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದರು.