ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನನಗೆ ನೀಡಿದ್ದ ಭರವಸೆಯಂತೆ ಪ್ರಥಮ ದರ್ಜೆ ಸಹಾಯಕರ(ಎಫ್ಡಿಎ) ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ಆದರೆ, ಉಳಿದ ನೇಮಕಾತಿಗಳಿಗೆ ನಡೆದ ಪರೀಕ್ಷೆಗಳ ಅಂತಿಮ ಪಟ್ಟಿ ಯಾವಾಗ ಬಿಡುಗಡೆಯಾಗಲಿದೆ? ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಕೆಪಿಎಸ್ಸಿ ಇಂದು ಪ್ರಥಮ ದರ್ಜೆ ಸಹಾಯಕರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ನನಗೆ ಮೇ 31ರಂದು ಭರವಸೆ ಕೊಟ್ಟಂತೆ ಲೋಕಸೇವಾ ಆಯೋಗ ನಡೆದುಕೊಂಡಿದೆ. ಅದಕ್ಕಾಗಿ ಧನ್ಯವಾದಗಳು. ಇದೇ ರೀತಿ ಅಂದು ಭರವಸೆ ಕೊಟ್ಟಂತೆ ಕೆಎಎಸ್ ಮುಖ್ಯ ಪರೀಕ್ಷೆ ಅಂತಿಮ ಪಟ್ಟಿ (1:3), ದ್ವಿತೀಯ ದರ್ಜೆ ಸಹಾಯಕರ ಅಂತಿಮ ಪಟ್ಟಿ, ಮೋಟಾರು ವಾಹನ ನಿರೀಕ್ಷಕರ ಪಟ್ಟಿ , ಮೊರಾರ್ಜಿ ದೇಸಾಯಿ ಶಾಲೆಗಳ ಚಿತ್ರಕಲಾ ಪದವೀಧರ ಶಿಕ್ಷಕರ ಪಟ್ಟಿ, ಮತ್ತಿತರ ಪಟ್ಟಿಗಳನ್ನು ಭರವಸೆ ಕೊಟ್ಟಂತೆ ಬಿಡುಗಡೆ ಮಾಡುವುದನ್ನು ಎದುರು ನೋಡುತ್ತಿದ್ದೇನೆ. ಆ ಎಲ್ಲಾ ಪಟ್ಟಿ ಯಾವಾಗ ಬಿಡುಗಡೆಯಾಗಲಿದೆ ಎಂದು ಕೆಪಿಎಸ್ಸಿಯನ್ನು ಮತ್ತೆ ಪ್ರಶ್ನಿಸಿದ್ದಾರೆ.
ಮೇ 31 ರಂದು ಕೆಪಿಎಸ್ಸಿ ಕಚೇರಿಯ ಬಾಗಿಲು ತಟ್ಟುವ ಮೂಲಕ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ವಿಭಿನ್ನ ಪ್ರತಿಭಟನೆ ನಡೆಸಿದ್ದರು. 2021ರ ಫೆಬ್ರವರಿಯಲ್ಲಿ ನಡೆದ ಕೆಎಎಸ್ ಮುಖ್ಯ ಪರೀಕ್ಷೆಗಳ ಫಲಿತಾಂಶ ಒಂದೂವರೆ ವರ್ಷದ ಬಳಿಕವೂ ಪ್ರಕಟವಾಗಿಲ್ಲ.
ಅದೇ ರೀತಿ ಹತ್ತಾರು ಇಲಾಖೆಗಳಿಗೆ ಸಿಬ್ಬಂದಿ ನೇಮಕಾತಿಗೆ ಸಂಸ್ಥೆ ಅನುಸರಿಸುತ್ತಿರುವ ವಿಳಂಬ ಧೋರಣೆಯಿಂದ ಇಡೀ ಆಡಳಿತ ವ್ಯವಸ್ಥೆ ನಲುಗುತ್ತಿದೆ ಎಂದು ಕಿಡಿಕಾರಿ ಧರಣಿ ನಡೆಸಿದ್ದರು. ಮಾಜಿ ಸಚಿವರ ಹೋರಾಟಕ್ಕೆ ಮಣಿದಿದ್ದ ಕೆಪಿಎಸ್ಸಿ ಆದಷ್ಟು ಬೇಗ ಪಟ್ಟಿ ಪ್ರಕಟಿಸುವ ಭರವಸೆ ನೀಡಿತ್ತು. ಅದರಂತೆ ಈಗ ಪ್ರಥಮ ದರ್ಜೆ ಸಹಾಯಕರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ.
ಇದನ್ನೂ ಓದಿ: ಕೆಪಿಎಸ್ಸಿ ನೇಮಕಾತಿಯಲ್ಲಿ ವಿಳಂಬ : ಮಾಜಿ ಸಚಿವ ಸುರೇಶ್ ಕುಮಾರ್ ವಿನೂತನ ಪ್ರತಿಭಟನೆ