ಬೆಂಗಳೂರು : ರಾಜ್ಯದಲ್ಲಿ ಮೇ 24ಕ್ಕೆ ಲಾಕ್ಡೌನ್ ಅಂತ್ಯವಾಗುವುದಿಲ್ಲ, ಮುಂದುವರಿಯಲಿದೆ ಎಂಬ ಮಾತು ಕೇಳಿಬರುತ್ತಿದೆ. ಲಾಕ್ಡೌನ್ ವೇಳೆ ಸರ್ಕಾರದ ವಿರುದ್ಧ ಹೋರಾಟಕ್ಕೆ ಪ್ರತಿಪಕ್ಷ ಕಾಂಗ್ರೆಸ್ ತನ್ನದೇ ಆದ ಕಾರ್ಯತಂತ್ರ ರೂಪಿಸಲು ತೀರ್ಮಾನಿಸಿದೆ.
ದೀರ್ಘಾವಧಿ ಲಾಕ್ಡೌನ್ ಜಾರಿಯಾದರೆ ಪಕ್ಷದ ಬೆಳವಣಿಗೆ, ಜನರ ದೃಷ್ಟಿಯಲ್ಲಿ ಗುರುತಿಸಿಕೊಳ್ಳುವಂತಹ ಕಾರ್ಯಕ್ರಮ, ಹೋರಾಟ ನಡೆಸಲು ಸಾಧ್ಯವಿಲ್ಲ. ವಿವಿಧ ಸಮುದಾಯದವರಿಗೆ ಆಹಾರದ ಕಿಟ್, ಆರೋಗ್ಯ ಕಿಟ್ ಹಾಗೂ ಆರೋಗ್ಯ ಸೇವೆ ನೀಡಿದರೆ ಜನರ ಮಧ್ಯೆ ಉತ್ತಮ ಸೇವಕರು ಎನಿಸಿಕೊಳ್ಳಲು ಸಾಧ್ಯವಿಲ್ಲ. ಜನರ ಅಗತ್ಯ ಈಡೇರಿಸುವ ಜವಾಬ್ದಾರಿ ಪ್ರತಿಪಕ್ಷವಾದ ತಮಗೂ ಇರುತ್ತದೆ. ಈ ಕಾರ್ಯಗಳಿಂದ ಜನರ ಗಮನ ಸೆಳೆಯಲು ಸಾಧ್ಯವಿಲ್ಲ. ಪಕ್ಷದ ಬಲವರ್ಧನೆಗೆ ನೇರವಾಗಿ ಅಖಾಡಕ್ಕಿಳಿಯಲು ಸಾಧ್ಯವಿಲ್ಲ. ಆನ್ಲೈನ್ ಮೂಲಕ ರಾಜ್ಯದ ಮೂಲೆ ಮೂಲೆಯ ಕಾರ್ಯಕರ್ತರನ್ನು ಸಂಪರ್ಕಿಸಲು ಸಾಧ್ಯವಿಲ್ಲ ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಕಳೆದ ಒಂದು ವಾರದ ಹಾಗೂ ಕಳೆದ ವರ್ಷದ ಲಾಕ್ಡೌನ್ ವೇಳೆಯಲ್ಲಿ ಅರಿವಾಗಿದೆ.
ಇದರಿಂದಾಗಿ ಹೊಸದಾಗಿ ಪ್ರಯತ್ನ ಮಾಡಲೇಬೇಕಾದ ಅನಿವಾರ್ಯ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದೆ. ಪಕ್ಷದ ತಳಮಟ್ಟದ ಕಾರ್ಯಕರ್ತರನ್ನು ತಲುಪಲು, ಹುರಿದುಂಬಿಸಲು, ಸ್ಥಳೀಯವಾಗಿ ಇವರು ಜನರ ಸೇವೆಗೆ ಮುಂದಾಗಲು ಉತ್ತೇಜಿಸಲು ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್ ನಾಯಕರನ್ನು ಒಗ್ಗೂಡಿಸಲು ರಾಜ್ಯ ಕಾಂಗ್ರೆಸ್ ನಾಯಕರು ಪ್ರಯತ್ನ ಆರಂಭಿಸಿದ್ದಾರೆ.
ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ತೆರಳುವುದು ಕಷ್ಟಸಾಧ್ಯ. ಆದ್ದರಿಂದ ಪ್ರತಿ ಜಿಲ್ಲಾವಾರು ಹಿರಿಯ ಮುಖಂಡರ ಜತೆ ಕಾಂಗ್ರೆಸ್ ರಾಜ್ಯ ನಾಯಕರು ಆನ್ಲೈನ್ ಮೂಲಕ ಮಾರ್ಗದರ್ಶನ ನೀಡಲಿದ್ದು, ಇವರು ಮುಂದಿನ ಹಂತದಲ್ಲಿ ತಳ ಮಟ್ಟದ ಕಾರ್ಯಕರ್ತರನ್ನು ಖುದ್ದಾಗಿ ತಲುಪಿ ಮಾರ್ಗದರ್ಶನ ನೀಡುವ ಕಾರ್ಯ ಮಾಡಿಸಲು ಕೈ ನಾಯಕರು ಮುಂದಾಗಿದ್ದಾರೆ.
ಈಗಾಗಲೇ ಈ ನಿಟ್ಟಿನಲ್ಲಿ ತುಮಕೂರು ಸೇರಿದಂತೆ ಹಲವು ಜಿಲ್ಲೆಯ ನಾಯಕರ ಜತೆ ಝೂಮ್ ಮೂಲಕ ಸಭೆ ನಡೆಸಿದ್ದಾರೆ. ಇಲ್ಲಿ ಪಕ್ಷದ ನಾಯಕರಿಗೆ ಸೂಕ್ತ ನಿರ್ದೇಶನ ನೀಡಿದ್ದು, ಅವರು ತಳ ಮಟ್ಟದ ಕಾರ್ಯಕರ್ತರಿಗೆ ಕೋವಿಡ್ ಸಂದರ್ಭವನ್ನು ಹೇಗೆ ಎದುರಿಸಬೇಕು, ತಮ್ಮನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವ ಜತೆಗೆ, ಜನರಿಗೆ ಹೇಗೆ ಸೇವೆ ಒದಗಿಸಬೇಕು. ಸರ್ಕಾರದ ವೈಫಲ್ಯ ತಿಳಿಸುವ ಜತೆಗೆ ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಜನೋಪಕಾರಿ ಕೆಲಸದ ಬಗ್ಗೆ ಆಗಾಗ್ಗೆ ವಿವರ ಒದಗಿಸಬೇಕು.
ಪ್ರತಿ ಮನೆಗೂ ತೆರಳಿ ಜನರ ಆರೋಗ್ಯ ವಿಚಾರಿಸಬೇಕು. ಅಗತ್ಯ ಇರುವವರಿಗೆ ಸಹಾಯ ಮಾಡಬೇಕು. ಅದಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ಪಕ್ಷವೇ ನೀಡಲಿದೆ. ಜನರಿಗೆ ಕಾಂಗ್ರೆಸ್ ಪಕ್ಷ ನಿಮ್ಮ ಜತೆಗಿದೆ ಎನ್ನುವ ವಿಷಯ ತಲುಪಿಸಿದರೆ ಸಾಕು ಎನ್ನುವ ಮಾರ್ಗದರ್ಶನ ನೀಡಲಾಗುತ್ತಿದೆ.
ತನ್ಮೂಲಕ ಮಹಾಮಾರಿ ವಿರುದ್ಧ ತಾವು ಹೋರಾಟ ನಡೆಸುತ್ತಿದ್ದೇವೆ, ಜನ ಭಯ ಪಡಬೇಕಿಲ್ಲ. ಸರ್ಕಾರಕ್ಕೆ ಪರ್ಯಾಯವಾಗಿ ನಾವು ಜನಸೇವೆ ಮಾಡುತ್ತಿದ್ದೇವೆ. ಅಧಿಕಾರದಲ್ಲಿ ಇಲ್ಲದೆಯೇ ಇಷ್ಟು ಕೆಲಸ ಮಾಡಿದವರು, ಅಧಿಕಾರದಲ್ಲಿ ಇದ್ದಿದ್ದರೆ ಇನ್ನೆಷ್ಟು ಮಾಡುತ್ತಿದ್ದೆವು ಎನ್ನುವುದನ್ನು ಜನರ ಮನಸ್ಸಲ್ಲಿ ಬಿತ್ತಲು ಮುಂದಾಗಿದ್ದಾರೆ. ತನ್ಮೂಲಕ ಜನ ಸೇವೆ ಜತೆಗೆ 2023ರ ವಿಧಾನಸಭೆ ಚುನಾವಣೆಯ ಗೆಲುವನ್ನೂ ತಮ್ಮ ಪ್ರಮುಖ ವಿಚಾರವಾಗಿ ಮನಸ್ಸಲ್ಲಿ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.