ಮೈಸೂರು : ಅಂಗಾಂಗ ದಾನಕ್ಕೂ ಮುನ್ನ ಹಾಗೂ ನಂತರ ಬೇರೆಯವರಿಗೆ ಅಂಗಾಂಗ ಕಸಿ ಹೇಗೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಅಪೋಲೋ ಆಸ್ಪತ್ರೆಯ ವೈಸ್ ಪ್ರೆಸಿಡೆಂಟ್ ಹಾಗೂ ಅಪೋಲೊ ಆಸ್ಪತ್ರೆಯ ಯುನಿಟ್ ಹೆಡ್ ಆಗಿರುವ ಭರತೇಶ್ ರೆಡ್ಡಿ ಅವರು ಈಟಿವಿ ಭಾರತ್‌ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.
ಅಂಗಾಂಗ ದಾನಗಳಲ್ಲಿ ಎರಡು ವಿಧಾನ ಇದೆ. ಬದುಕಿದ್ದಾಗ ಮತ್ತು ಮೆದುಳು ನಿಷ್ಕ್ರಿಯಗೊಂಡ ನಂತರ ಅಂಗಾಂಗ ದಾನ ಮಾಡುವುದು. ರೋಗಿಯ ಕುಟುಂಬದವರೇ ಕೊಡಲು ಮೊದಲ ಪ್ರಾತಿನಿಧ್ಯ ಇರುತ್ತದೆ. ಇಲ್ಲಾ ಜೀವ ಸಾರ್ಥಕತೆಯಲ್ಲಿ ನೊಂದಿಣಿಯಾಗಿದ್ದರೆ ಅಲ್ಲಿಂದ ಪಡೆಯಬಹುದು.
ಜೀವಸಾರ್ಥಕತೆ : ಆರ್ಗನ್ ಟ್ರಾನ್ಸ್ ಫಾರ್ಮ್ ಆ್ಯಕ್ಟ್ ಪ್ರಕಾರ ಅಂಗಾಂಗ ದಾನವನ್ನು ಮಾಡಲಾಗುತ್ತದೆ. ಮೆದುಳು ನಿಷ್ಕ್ರಿಯಗೊಂಡ ರೋಗಿಯಿಂದ ಅಂಗಾಂಗ ದಾನ ಮಾಡಬೇಕಾದರೆ, ಮೊದಲು ವೈದ್ಯರು ವೈದ್ಯಕೀಯ ಪರೀಕ್ಷೆಗಳಿಂದ ಮಿದುಳು ನಿಷ್ಕ್ರಿಯವಾಗಿರುವುದನ್ನು ಖಚಿತಪಡಿಸಿ ಆಸ್ಪತ್ರೆಯ ಕೌನ್ಸಿಲ್ ಟೀಂ ಮೃತಪಟ್ಟ ವ್ಯಕ್ತಿಯ ಕುಟುಂಬದವರ ಹತ್ತಿರ ಅಂಗಾಂಗ ದಾನದ ಬಗ್ಗೆ ಮಾಹಿತಿ ನೀಡುತ್ತಾರೆ. ಅವರು ಒಪ್ಪಿಗೆ ನೀಡಿದರೆ ನಂತರ ಪೊಲೀಸರಿಗೆ ಮಾಹಿತಿ ನೀಡುತ್ತೇವೆ. ಜೊತೆಗೆ ಜೀವಸಾರ್ಥಕತೆ (ಸ್ಟೇಟ್ ಆರ್ಗನ್ ಟ್ರಾನ್ಸ್ ಫಾರ್ಮ್ ಆರ್ಗನೈಸೇಶನ್ ) ಅವರಿಗೆ ಮಾಹಿತಿ ನೀಡಲಾಗುವುದು.
ನಂತರ ಆರ್ಗನ್ ಟ್ರಾನ್ಸ್ಫಾರ್ಮಾನೇಷನ್ ಆರ್ಗನೈಸೇಶನ್‌ನಿಂದ ಒಬ್ಬರು ಅಧಿಕಾರಿ ಬಂದು ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿ ಹಾಗೂ ದಾಖಲೆಗಳನ್ನು ಪರಿಶೀಲನೆ ನೆಡೆಸಿ ಒಪ್ಪಿಗೆ ಇದ್ದರೆ ಅಂಗಾಂಗ ದಾನಕ್ಕೆ ಘೋಷಣೆ ಮಾಡುತ್ತಾರೆ. ನಂತರ ಅಂಗಾಂಗಗಳನ್ನು ತೆಗೆದುಕೊಂಡು ಜೀವಸಾರ್ಥಕತೆಗೆ ಕಳುಹಿಸುತ್ತೇವೆ. ನಂತರ ಅದರಲ್ಲಿ ನೋಂದಣಿಯಾಗಿರುವ ರೋಗಿಗೆ ಅಂಗಾಂಗ ಕಸಿ ಮಾಡಲಾಗುತ್ತದೆ. ಅಂಗಾಂಗಗಳನ್ನು ಗ್ರೀನ್ ಕಾರಿಡಾರ್ ವ್ಯವಸ್ಥೆಯಲ್ಲಿ ಅವಶ್ಯಕತೆ ಇರುವಲ್ಲಿಗೆ ಕಳುಹಿಸಲಾಗುತ್ತದೆ ಎಂದರು.
ಅಂಗಾಂಗ ದಾನ ಹೆಸರಿನಲ್ಲೇ ಇರುವಂತೆ ಇದು ದಾನವಾಗಿರುವುದರಿಂದ ಅಂಗಾಂಗ ದಾನ ಮಾಡಿದ ವ್ಯಕ್ತಿಯ ಕುಟುಂಬಕ್ಕೆ ಯಾವುದೇ ಹಣದ ಸಹಾಯ ಮಾಡಲಾಗುವುದಿಲ್ಲ. 60 ವರ್ಷ ವಯಸ್ಸಿಗಿಂತ ಕೆಳಗಿನವರ ಅಂಗಾಂಗಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ.
ನಮ್ಮ ದೇಶದಲ್ಲಿ ಮೆದುಳು ನಿಷ್ಕ್ರಿಯಗೊಂಡ ನಂತರ ಅಂಗಾಂಗ ದಾನ ಮಾಡುವುದು ಬಹಳ ಕಡಿಮೆ. ನಮ್ಮ ದೇಶದಲ್ಲಿ ಕೇರಳ, ತಮಿಳುನಾಡು, ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ಅಂಗಾಂಗ ದಾನ ಹೆಚ್ಚಾಗಿದೆ. ನಮ್ಮ ರಾಜ್ಯದಲ್ಲಿ ಅಂಗಾಂಗ ದಾನ ಕಡಿಮೆ. ಹಾಗಾಗಿ, ಸರ್ಕಾರ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ವೈದ್ಯರಾದ ಭರತೇಶ್ ರೆಡ್ಡಿ ತಿಳಿಸಿದರು.
ಇದನ್ನೂ ಓದಿ: ಎಸ್ಟಿಗೆ ಶೇ.7.5 ರಷ್ಟು ಮೀಸಲಾತಿ.. ಕಾನೂನು ಸಚಿವರ ಭರವಸೆ ಬಳಿಕ ಧರಣಿ ಕೈಬಿಟ್ಟ ಕಾಂಗ್ರೆಸ್..