ಬೆಂಗಳೂರು: ಕೊರೊನಾ ಸೋಂಕು ತಡೆಗೆ ರಾಜ್ಯಾದ್ಯಂತ ಹೇರಲಾಗಿದ್ದ ವೀಕೆಂಡ್ ಕರ್ಫ್ಯೂ ಅನ್ನು ಸರ್ಕಾರ ರದ್ದು ಬೆನ್ನಲ್ಲೇ ಶನಿವಾರ- ಭಾನುವಾರ ಎಂದಿನಂತೆ ಸಾರ್ವಜನಿಕ ಸೇವೆಗೆ ಬಿಎಂಟಿಸಿ ಬಸ್ ಸಂಚಾರ ಲಭ್ಯವಾಗಲಿದೆ.
ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಪ್ರಭಾವದಿಂದಾಗಿ ಸರ್ಕಾರ ಮೊದಲ ಹಂತದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿತ್ತು. ಯಾವಾಗ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದಾಗ ವೀಕೆಂಡ್ ಕರ್ಫ್ಯೂ ಜಾರಿ ಮಾಡಿತ್ತು. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಬಿಎಂಟಿಸಿ ಬಸ್ಸುಗಳು ಕೇವಲ ತುರ್ತು ಸೇವೆಗೆ ಅಷ್ಟೇ ಬಳಕೆ ಮಾಡಲಾಗುತ್ತಿತ್ತು.
ನಿತ್ಯ ಸಾವಿರಾರು ಸಂಖ್ಯೆಯಲ್ಲಿ ರಸ್ತೆಗಿಳಿಯುತ್ತಿದ್ದ ಬಿಎಂಟಿಸಿ ಬಸ್ಸು ಕರ್ಫ್ಯೂ ಕಾರಣಕ್ಕೆ ಸಾರ್ವಜನಿಕ ಸೇವೆಗೆ ತಾತ್ಕಾಲಿಕ ನಿಷೇಧ ಹೇರಲಾಗಿತ್ತು. ಕೇವಲ ತುರ್ತು ಅಗತ್ಯಕ್ಕಷ್ಟೇ 700- 800 ಬಸ್ಸುಗಳು ರಸ್ತೆಗಿಳಿದಿದ್ದವು. ಇದೀಗ ಕರ್ಫ್ಯೂ ತೆರವು ಬೆನ್ನಲ್ಲೇ ಇದೀಗ ನಾಳೆಯಿಂದ ಎಂದಿನಂತೆ ಬಿಎಂಟಿಸಿ ಬಸ್ಸುಗಳು ರಸ್ತೆಗಿಳಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂದಿನಂತೆ ಇರಲಿದೆ ಮೆಟ್ರೋ ಸೇವೆ
ವಾರಾಂತ್ಯದ ಕರ್ಫ್ಯೂ ತೆರವಾಗಿದ್ದರಿಂದ ನಮ್ಮ ಮೆಟ್ರೋ ರೈಲುಗಳ ಕಾರ್ಯಾಚರಣೆಯೂ ಎಂದಿನಂತೆ ಇರಲಿದೆ. ನಾಳೆಯಿಂದ ಜಾರಿಗೆ ಬರುವಂತೆ ಎಂದಿನಂತೆ ಮೆಟ್ರೋ ಸೇವೆ ವಾರದ ಎಲ್ಲ ದಿನಗಳಲ್ಲಿ (ಭಾನುವಾರ ಹೊರತುಪಡಿಸಿ) 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಹಾಗೂ ಭಾನುವಾರದಂದು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಲಭ್ಯವಿರುತ್ತದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.