ಬೆಂಗಳೂರು: ಸರ್ಕಾರದಿಂದ ಬಿಬಿಎಂಪಿ ಬಜೆಟ್ ಮಂಡನೆಗೆ ಅನುಮತಿ ಸಿಕ್ಕ ಕೂಡಲೇ ಮೇಯರ್ ಗೌತಮ್ ಕುಮಾರ್, ಉಪ ಮೇಯರ್ ಮೋಹನ್ ರಾಜು, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಸುದ್ದಿಗೋಷ್ಠಿ ನಡೆಸಿದರು.
ಈ ವೇಳೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಬಜೆಟ್ ಮಂಡನೆ ಕುರಿತು ಈಗಾಗಲೇ ಒಂದು ಸಭೆ ನಡೆಸಲಾಗಿದೆ. ದಿನಾಂಕ ನಿಗದಿಪಡಿಸುವ ಬಗ್ಗೆ ಚರ್ಚಿಸಲಾಗಿದೆ. ಪಾಲಿಕೆ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿ, ಶೀಘ್ರವಾಗಿ ಬಜೆಟ್ ಮಾಡಲಾಗುವುದು. ಕೆಎಂಸಿ (ಕರ್ನಾಟಕ ಮುನ್ಸಿಪಲ್ ಕಾರ್ಪೋರೇಶನ್) ನಿಯಮದ ಪ್ರಕಾರ ಮೂರನೇ ಒಂದು ಭಾಗ ಸಭೆಯಲ್ಲಿ ಕೋರಂ ಇದ್ದರೆ ಮಾತ್ರ ಬಜೆಟ್ ಮಂಡನೆ ಸಾಧ್ಯ. ಆದ್ರೆ ಈಗಿರುವ ತುರ್ತು ಪರಿಸ್ಥಿತಿಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡಿಸಲು ಸರ್ಕಾರ ಸೂಚಿಸಿದೆ. ಕೊರೊನಾ ವೈರಸ್ಗೆ ಸಂಬಂಧಿಸಿದಂತೆ ಬಜೆಟ್ನಲ್ಲಿ ಅನುದಾನ ಮೀಸಲಿಡಬೇಕಾಗುತ್ತದೆ. ಬೆಂಗಳೂರಿನ ವಿಚಾರವಾಗಿಯೂ ಉತ್ತಮ ಕಾರ್ಯಕ್ರಮ ನೀಡಲು ಬಜೆಟ್ನಲ್ಲಿ ಅನುದಾನ ಮೀಸಲಿಡಲಾಗಿದೆ ಎಂದರು.
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಮಾತನಾಡಿ, ಬಜೆಟ್ ಮೂಲಕ ನಗರಕ್ಕೆ ಮೂಲ ಸೌಕರ್ಯ ನೀಡಲಾಗುವುದು. ಕೊರೊನಾ ಸಮಸ್ಯೆಯಿಂದ ಬಜೆಟ್ ತಡವಾಗಿದೆ. ಸರ್ಕಾರಕ್ಕೆ ಮನವಿ ನೀಡಿ, ಇದೀಗ ಸರ್ಕಾರದ ನಿರ್ದೇಶನದ ಮೇರೆಗೆ ಬಜೆಟ್ ಮಂಡಿಸಲಾಗುತ್ತದೆ. ಬಜೆಟ್ ಮಂಡನೆಯಾದರಷ್ಟೇ ವೇತನ, ಪಿಂಚಣಿ ನೀಡಲು ಸಾಧ್ಯ ಎಂದರು.