ಬೆಂಗಳೂರು : ದೇಶದ ಶಿಕ್ಷಣದಲ್ಲಿ ಮಾರಲ್ ಸೈನ್ಸ್ ಸೇರಿಸಬೇಕೆಂಬ ಡಿಮ್ಯಾಂಡ್ ಇದೆ. ಗುಜರಾತ್ನಲ್ಲಿ ಭಗವದ್ಗೀತೆ ಸೇರಿಸುತ್ತೇವೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಮಾಡುವ ಬಗ್ಗೆ ಸಿಎಂ ಜೊತೆಗೆ ಚರ್ಚೆ ಮಾಡುತ್ತೇವೆ. ಭಗವದ್ಗೀತೆ ಸೇರಿಸಬಾದರು ಅಂತೇನಿಲ್ಲಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯದಲ್ಲಿ ಮಾರಲ್ ಸೈನ್ಸ್ ಅವಳಡಿಕೆ ಬಗ್ಗೆ ಮುಖ್ಯಮಂತ್ರಿಗಳ ಸಲಹೆ ಪಡೆದು ತೀರ್ಮಾನ ಮಾಡುತ್ತೇವೆ. ಶಿಕ್ಷಣ ತಜ್ಞರೊಂದಿಗೆ ಚರ್ಚೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಸೂಕ್ತವಾದ ನಿರ್ಧಾರ ಮಾಡುತ್ತೇವೆ ಎಂದರು.
ಶಿಕ್ಷಣ ತಜ್ಞರು ಬೈಬಲ್, ಕುರಾನ್, ಭಗವದ್ಗೀತೆಗಳಲ್ಲಿನ ಒಳ್ಳೆ ಅಂಶಗಳನ್ನು ಸೇರಿಸಿ ಅಂತಾ ಹೇಳಬಹುದು. ಅದರ ಬಗ್ಗೆ ಕೂಡ ಚರ್ಚೆ ಆಗುತ್ತದೆ. ಈ ಹಿಂದೆ ಎಸ್‌ಎಂ ಕೃಷ್ಣ ಸಿಎಂ ಆಗಿದ್ದಾಗ ಅವರು ಕೂಡ ಭಗವದ್ಗೀತೆ ಓದುತ್ತಿದ್ದರಂತೆ. ಪ್ರತಿ ರಾತ್ರಿ ಭಗವದ್ಗೀತೆ ಓದುತ್ತಿದ್ದರಿಂದಲೇ ಅವರ ನೆಮ್ಮದಿ ಸಿಗುತ್ತದೆ ಅಂತಾ ಸ್ವತಃ ಕೃಷ್ಣ ಅವರೇ ಹೇಳುತ್ತಿದ್ದರು. ಹೀಗಾಗಿ, ಭಗವದ್ಗೀತೆ ಸೇರಿಸಬಾದರು ಅಂತೇನಿಲ್ಲ ಎಂದರು.
ಮಹಾತ್ಮ ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ನನ್ನ ತಾಯಿ ಬಾಲ್ಯದಲ್ಲಿ ರಾಮಾಯಣ, ಮಹಾಭಾರತ ಹೇಳಿಕೊಟ್ಟಿದ್ದೇ ನಾನು ಸತ್ಯವಂತನಾಗಲು ಕಾರಣವೆಂದು ಹೇಳಿದ್ದಾರೆ. ಯೌವ್ವನದಲ್ಲಿ ಸತ್ಯ ಹರಿಶ್ಚಂದ್ರರ ನಾಟಕ ನೋಡಿದ್ದಕ್ಕೆ ನಾನು ಸತ್ಯವಂತನಾಗಿದ್ದು ಎಂದಿದ್ದಾರೆ. ಆದ್ದರಿಂದ ಮಾರಲ್ ಸೈನ್ಸ್ ಅಳವಡಿಸುವುದರ ಬಗ್ಗೆ ಚರ್ಚಿಸುತ್ತೇವೆ. ಶಿಕ್ಷಣ ತಜ್ಞರ ಅಭಿಪ್ರಾಯದಂತೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಇದನ್ನೂ ಓದಿ: ಆರ್.ಅಶೋಕ್ ಜೊತೆ ಯಾವುದೇ ಸಂಘರ್ಷ ನಡೆದಿಲ್ಲ: ಸಚಿವ ಅಶ್ವತ್ಥ್ ನಾರಾಯಣ