ಹೊಸಕೋಟೆ: ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೊಸಕೋಟೆಯನ್ನು ಸ್ಯಾಟಿಲೈಟ್ ಟೌನ್ ಆಗಿ ಅಭಿವೃದ್ಧಿಗೊಳಿಸುವ ಚಿಂತನೆ ಇದೆ ಎಂದು ತಿಳಿಸಿದರು.
ಹೊಸಕೋಟೆಯಲ್ಲಿ ಆರ್ಥಿಕ ಚಟುವಟಿಕೆಗೆ ಹಲವು ಅವಕಾಶಗಳಿವೆ. ಕೈಗಾರಿಕೆ, ಉಗ್ರಾಣ ಸೌಲಭ್ಯ, ಕುಡಿಯುವ ನೀರು, ವಿದ್ಯುತ್, ಸ್ವಚ್ಛತೆ, ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ ಅಭಿವೃದ್ಧಿಗೊಳಿಸಲು ವಿಶೇಷ ಗಮನ ನೀಡಲಾಗುವುದು. ಮೆಟ್ರೋ ಅಥವಾ ಸಬ್ ಅರ್ಬನ್ ಕಾಮಗಾರಿಗಳನ್ನು ಮುಂದಿನ ಯೋಜನೆಗಳಲ್ಲಿ ಸೇರ್ಪಡೆಗೊಳಿಸಲಾಗುವುದು ಎಂದರು.
ಎತ್ತಿನ ಹೊಳೆ ಯೋಜನೆ ಪೂರ್ಣಗೊಳಿಸುವ ಜವಾಬ್ದಾರಿ ನಮ್ಮದು: 2012 ರಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿವ ನೀರಿನ ಕೊರತೆ ನೀಗಿಸಲೆಂದು ಎತ್ತಿನಹೊಳೆ ಯೋಜನೆ ರೂಪುಗೊಂಡಿತು. ಎತ್ತಿನ ಹೊಳೆ ಯೋಜನೆ ಪೂರ್ಣಗೊಳಿಸುವ ಜವಾಬ್ದಾರಿ ನಮ್ಮದು, ಭೂ ಸ್ವಾಧೀನ ಕಾರ್ಯಕ್ಕೆ ಹಣ ಬಿಡುಗಡೆ ಮಾಡಲಾಗಿದೆ.
ಈ ಪ್ರಕ್ರಿಯೆ ಮುಗಿದ ಕೂಡಲೇ ಕಾಮಗಾರಿ ತ್ವರಿತಗೊಳಿಸಿ ಬಯಲುಸೀಮೆಗೆ ನೀರು ತರುವ ಕೆಲಸ ಮಾಡಲಾಗುವುದು. ಒಂದೂವರೆ ವರ್ಷದಲ್ಲಿ 24 ಟಿಎಂಸಿ ನೀರಿನ ಬಳಕೆ ಮಾಡಲು ಸಾಧ್ಯವಾಗಲಿದೆ. ಹೊಸಕೋಟೆಗೂ ಎತ್ತಿನಹೊಳೆ ನೀರು ತಲುಪಲಿದೆ ಎಂದು ಸಿಎಂ ಇದೇ ವೇಳೆ ಅಭಯ ನೀಡಿದರು.
ಸಮಗ್ರ ಅಭಿವೃದ್ಧಿಯತ್ತ ಹೊಸಕೋಟೆ ದಾಪುಗಾಲು: ಈ ಬಾರಿಯ ಆಯವ್ಯಯದಲ್ಲಿ ಎಲೆಮಲ್ಲಪ್ಪನ ಕೆರೆ ಸಂಪೂರ್ಣ ಅಭಿವೃದ್ಧಿಗೆ ಬಜೆಟ್‍ನಲ್ಲಿ ಅನುದಾನ ಒದಗಿಸಲಾಗಿದೆ. ಹೊಸಕೋಟೆ ಕೆರೆ ತುಂಬಿಸುವ ಯೋಜನೆ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಈ ವರ್ಷ ಮಂಜೂರಾತಿ ನೀಡಲಾಗುವುದು.
ಆನಗೊಂಡ ಹೋಬಳಿಯಲ್ಲಿ 39 ಕೆರೆ ತುಂಬುವ ಯೋಜನೆಯ ಕಾಮಗಾರಿ ನಡೆದಿದೆ. ಅದಕ್ಕೆ ಹೆಚ್ಚುವರಿಯಾಗಿ 50 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಆದಷ್ಟು ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಸಮಗ್ರ ಅಭಿವೃದ್ಧಿಯತ್ತ ಹೊಸಕೋಟೆ ದಾಪುಗಾಲು ಹಾಕುತ್ತಿದೆ ಎಂದು ಹೇಳಿದರು.
ಪ್ರಮುಖ ನಗರವಾಗಿ ಹೊಸಕೋಟೆ ಅಭಿವೃದ್ಧಿ: ಹೊಸಕೋಟೆ ಪ್ರಮುಖ ನಗರವಾಗಿ ಅಭಿವೃದ್ಧಿಯಾಗುತ್ತಿದೆ. ಈ ಬಾರಿಯ ಬಜೆಟ್‍ನಲ್ಲಿ 3,885 ಕೋಟಿ ರೂ.ಗಳನ್ನು ಎಲ್ಲ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿಗಳಿಗೆ ಒದಗಿಸಲಾಗಿದೆ. 3 ಸಾವಿರ ಕಿ.ಮೀ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ 2,600 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ರಾಜ್ಯದ ನೀರಾವರಿಗೆ 22 ಸಾವಿರ ಕೋಟಿ ರೂ.ಗಳನ್ನು ಒದಗಿಸಿದೆ. ಅದರಲ್ಲಿ ಎತ್ತಿನಹೊಳೆ ಯೋಜನೆಯೂ ಸೇರಿದೆ.
8 ರೈಲ್ವೆ ಯೋಜನೆಗಳಿಗೆ ಹಣಕಾಸು ಒದಗಿಸಲಾಗಿದೆ. ಸುಮಾರು 8 ಬಂದರುಗಳ ಅಭಿವೃದ್ಧಿ, 5 ಲಕ್ಷ ಮನೆಗಳನ್ನು ಗ್ರಾಮೀಣ ಭಾಗದಲ್ಲಿ ಹಾಗೂ 1 ಲಕ್ಷ ನಗರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಅಭಿವೃದ್ಧಿಗೆ ಆರೋಗ್ಯಕರ ಪೈಪೋಟಿ: ಹೊಸಕೋಟೆಯಲ್ಲಿ ಆರೋಗ್ಯಕರ ಪೈಪೋಟಿ ಇದೆ. ಜನನಾಯಕರಾಗುವುದು ಬಹಳ ಮುಖ್ಯ. ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಗಳಿಸುವವರು ಮಾತ್ರ ಜನ ನಾಯಕರಾಗುತ್ತಾರೆ. ಜನಪರವಾದ ರಾಜಕಾರಣ ಪ್ರಜಾಪ್ರಭುತ್ವದ ಆಧಾರವಾಗಿದೆ ಎಂದು ತಿಳಿಸಿದರು.
ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಹೊಸಕೋಟೆ ನಗರದ ಸುತ್ತ- ಮುತ್ತ ಅನೇಕ ಕೈಗಾರಿಕಾ ಪ್ರದೇಶಗಳಿರುವುದರಿಂದ ಮೆಟ್ರೋ ರೈಲನ್ನು ಹೊಸಕೋಟೆಗೆ ವಿಸ್ತರಿಸುವಂತೆ, ಕುಡಿಯುವ ನೀರಿನ ಕೊರತೆ ಅನುಭವಿಸುತ್ತಿರುವ ಹೊಸಕೋಟೆಗೆ ಕಾವೇರಿ 5ನೇ ಹಂತದಲ್ಲಿ ಕುಡಿಯುವ ನೀರು ಪೂರೈಸುವಂತೆ ಮನವಿ ಮಾಡಿದರು.
ನಾನು ಹೊಸಕೋಟೆಗೆ ಬಂದು 18 ವರ್ಷ ಕಳೆಯಿತು. ಇಲ್ಲಿ ಶಾಂತಿ ಸುವ್ಯವಸ್ಥೆಯನ್ನ ತಂದಿರುವ ಹೆಮ್ಮೆಯಿದೆ. ತಾಲೂಕಿನ 35 ಗ್ರಾಮಗಳಲ್ಲಿ ಮತದಾನದ ಹಕ್ಕನ್ನ ಜನ ಕಳೆದುಕೊಂಡಿದ್ದರು. ಆದರೆ, ಈಗ ಎಲ್ಲರಿಗೂ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿದೆ. ಮುಂದಿನ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸಿ ಬಿಜೆಪಿಯನ್ನ ಅಧಿಕಾರಕ್ಕೆ ತರಲು ನಾನು ಮತ್ತು ಸಚಿವ ಸುಧಾಕರ್ ಶ್ರಮಿಸುವುದಾಗಿ ತಿಳಿಸಿದರು.
ಇದನ್ನೂ ಓದಿ: ರೈತನಿಂದ ಹಣ ಸುಲಿಗೆ ಮಾಡಿ ನಂದಿಬೆಟ್ಟಕ್ಕೆ ಹೋಗಿ ಎಂಜಾಯ್ ಮಾಡಿದ್ದ ಯುವಕರು ಅರೆಸ್ಟ್