ಬೆಂಗಳೂರು: ಗುರು ಹಾಗೂ ಶನಿ ಗ್ರಹಗಳು ಒಂದರ ಪಕ್ಕ ಒಂದು ಇದ್ದ ಹಾಗೆ ಕಂಡುಬರುತ್ತಿದ್ದು, ಈ ಹಿನ್ನೆಲೆ ಸಿಲಿಕಾನ್ ಸಿಟಿಯ ಖಗೋಳ ಆಸಕ್ತರು ಜವಾಹರ ಲಾಲ್ ನೆಹರು ತಾರಾಲಯಕ್ಕೆ ನಿನ್ನೆ ಸಂಜೆ ದೌಡಾಯಿಸಿದ್ದರು.
ಈ ಕುರಿತು 'ಈಟಿವಿ ಭಾರತ'ದೊಂದಿದೆ ಮಾತನಾಡಿದ ಜವಾಹರ ಲಾಲ್ ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಗಲಗಲಿ, ಖಗೋಳದಲ್ಲಿ ಒಂದು ಮುಖ್ಯವಾದ ಘಟನೆ ನೆಡೆಯುತ್ತಿದ್ದು, ಎರಡು ಅಕಾಶಕಾಯಗಳು ಒಂದರ ಹತ್ತಿರ ಇನ್ನೊಂದು ಬಂದಿರುವ ಹಾಗೆ ಕಂಡುಬರುತ್ತಿದೆ. ಶನಿ ಹಾಗೂ ಗುರು ಗ್ರಹ ತುಂಬಾ ಹತ್ತಿರಕ್ಕೆ ಬಂದಿವೆ. ಇದಕ್ಕೆ "ಗ್ರೇಟ್ ಕನ್ಜಕ್ಷನ್" ಅಂತ ಕರೆಯುತ್ತೇವೆ ಎಂದು ವಿಸ್ಮಯದ ಬಗ್ಗೆ ಮಾಹಿತಿ ನೀಡಿದರು.
ಸೂರ್ಯಾಸ್ತದ ನಂತರ ಪಶ್ಚಿಮ ದಿಕ್ಕಿನಲ್ಲಿ ಪ್ರಕಾಶಮಾನವಾಗಿ ಕಾಣುವ ಗುರು ಗ್ರಹ ಮತ್ತು ಅದರ ಸಮೀಪದಲ್ಲೇ ಮಂಕಾದ ಶನಿ ಗ್ರಹವನ್ನು ಕಾಣಬಹುದು. ನಮಗೆ ತಿಳಿದಿರುವಂತೆ ಗ್ರಹಗಳು ಸೂರ್ಯನ ಸುತ್ತ ತಿರುಗುತ್ತವೆ, ನಾವು ಭೂಮಿಯಿಂದ ನೋಡಿದಾಗ ಗ್ರಹಗಳು ಒಂದೊಂದು ದಿವಸ ಬೇರೆ ಬೇರೆ ಭಾಗದಲ್ಲಿ ಇರುವಂತೆ ಕಣ್ಣಿಗೆ ಕಾಣುತ್ತವೆ. ಈಗ ಗುರು ಮತ್ತು ಶನಿ ಗ್ರಹ ಎರಡೂ ಹತ್ತಿರ ಬಂದಿರುವಂತೆ ಗೋಚರಿಸುತ್ತಿವೆ. ನಾವು ದೂರದರ್ಶಕ ಮುಕಾಂತರ ನೋಡಿದರೆ ಎರಡು ಒಟ್ಟಿಗೆ ಇರುವಂತೆ ಕಾಣುತ್ತದೆ. ಬರಿಗಣ್ಣಿಗೆ ಪಕ್ಕ ಪಕ್ಕದಲ್ಲೇ ಈ ಗ್ರಹಗಳು ಸೋಮವಾರ ಗೋಚರಿಸುತ್ತವೆ ಎಂದು ತಿಳಿಸಿದರು.
ಗ್ರಹಗಳು ದಿನೇ ದಿನೇ ಹತ್ತಿರ ಬರುತ್ತಿದ್ದು. ಶನಿವಾರದಿಂದಲೇ ಸಾರ್ವಜನಿಕರಿಗೆ ಟೆಲಿಸ್ಕೋಪ್ ಮೂಲಕ ತೋರಿಸುವ ಏರ್ಪಾಡನ್ನು ತಾರಾಲಯದಿಂದ ಮಾಡಿದ್ದೇವೆ. ಈ ವಿಸ್ಮಯವನ್ನು ಜಾಲತಾಣದಿಂದ ಲೈವ್ ಆಗಿ ಕೂಡ ಖಗೋಳ ಆಸಕ್ತರಿಗೆ ತೋರಿಸುವ ವ್ಯವಸ್ಥೆ ಮಾಡಲಾಗಿದೆ. ವಸಿಷ್ಠ ಹಾಗೂ ಅರುಂಧತಿ ನಕ್ಷತ್ರ ಪಕ್ಕ ಪಕ್ಕದಲ್ಲಿ ಇದ್ದೂ ಕಣ್ಣಿಗೆ ದೂರವಿರುವಂತೆ ಕಾಣುತ್ತದೆ ಎಂದು ತಿಳಿಸಿದರು.
ಭೂಮಿ, ಗುರು ಗ್ರಹದ ಮಧ್ಯೆ ಎಷ್ಟು ದೂರ ಇದೆಯೋ, ಶನಿ ಹಾಗೂ ಗುರು ಗ್ರಹ ಅಷ್ಟೇ ದೂರದಲ್ಲಿವೆ. ಈಗ ನಾವು ಶನಿ ಗ್ರಹದಿಂದ ನೋಡಿದರೆ ಗುರು ಗ್ರಹ ಹಾಗೂ ಭೂಮಿ ಎರಡೂ ಒಟ್ಟಿಗೆ ಇರುವಂತೆ ಗೋಚರಿಸುತ್ತವೆ ಎಂದು ಮಾಹಿತಿ ನೀಡಿದರು.
ಶನಿ ಹಾಗೂ ಗುರು ಗ್ರಹಗಳು ಒಂದರ ಪಕ್ಕದಲ್ಲಿ ಒಂದು ಬಂದಿಲ್ಲದಿದ್ದರೂ ಇಲ್ಲಿಂದ ಒಂದರ ಪಕ್ಕ ಒಂದು ಇರುವಂತೆ ಕಾಣಿಸುತ್ತದೆ. ಈ ವಿಸ್ಮಯವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಭಾನುವಾರ ಹಾಗೂ ಸೋಮವಾರ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಆಸಕ್ತಿ ಇರುವವರು ನಮ್ಮ ಜಾಲತಾಣದಲ್ಲಿ ತಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿ ಕೊಟ್ಟು ತಾರಾಲಯಕ್ಕೆ ಭೇಟಿ ನೀಡಿದರೆ, ವಿಶೇಷ ವ್ಯವಸ್ಥೆ ಕಲ್ಪಿಸಿ ಕೊಡಲಾಗುವುದು. ಕೋವಿಡ್ ಇರುವ ಕಾರಣ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಹೆಚ್ಚು ಜನ ದಟ್ಟಣೆ ಆಗಬಾರದು ಎಂಬ ದೃಷ್ಠಿಯಿಂದ ಲೈವ್ ವ್ಯವಸ್ಥೆಯನ್ನು ಸಂಜೆ 6.30 ರಿಂದ 7.30ರ ವರೆಗೆ ಮಾಡಲಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಒಟ್ಟಿನಲ್ಲಿ ವಿಶೇಷ ಖಗೋಳ ಘಟನಾವಳಿಗೆ ಸಾಕ್ಷಿಯಾಗಲು ನಮ್ಮ ಬೆಂಗಳೂರಿನ ಜವಾಹರ ಲಾಲ್ ನೆಹರು ತಾರಾಲಯ ಸರ್ವ ರೀತಿಯಲ್ಲಿ ಸಜ್ಜಾಗಿದ್ದು, ಸಾರ್ವಜನಿಕರು ಕೂಡ ಕುತೂಹಲಕಾರಿ ಘಟನೆಯನ್ನು ವೀಕ್ಷಿಸಲು ಕಾತರರಾಗಿದ್ದಾರೆ.