ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಒತ್ತುವರಿ ಹಾಗೂ ದುರ್ಬಳಕೆಯನ್ನು ಸಿಬಿಐ ತನಿಖೆಗೆ ವಹಿಸಲು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ವಕ್ಫ್ ಆಸ್ತಿ ದುರ್ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗ ಸಲ್ಲಿಸಿರುವ ವಿಶೇಷ ವರದಿ ಆಧರಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ವಕ್ಫ್ ಆಸ್ತಿಗಳ ಒತ್ತುವರಿ ಹಾಗೂ ದುರ್ಬಳಕೆಯನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಮಾಜಿ ಸಚಿವ ಎಸ್. ಕೆ. ಕಾಂತ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದಾರೆ. ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಸಿಬಿಐ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಮಾ.29ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಶ್ರೀಧರ ಪ್ರಭು, ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಸರ್ಕಾರದ ಸಂವಿಧಾನಬದ್ಧ ಹೊಣೆಗಾರಿಕೆ. ರಾಜ್ಯದಲ್ಲಿ ವಕ್ಫ್ ಆಸ್ತಿಗಳ ದುರ್ಬಳಕೆಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಆಯೋಗ 2012ರಲ್ಲಿ ಸರ್ಕಾರಕ್ಕೆ ವಿಶೇಷ ವರದಿ ಸಲ್ಲಿಸಿದೆ, ಅದರಲ್ಲಿ ವಕ್ಫ್ ಆಸ್ತಿಗಳ ದುರ್ಬಳಕೆ ತಡೆಗೆ ಹಲವು ಮಹತ್ವದ ಶಿಫಾರಸ್ಸುಗಳನ್ನು ಮಾಡಿದೆ. ಆ ಶಿಫಾರಸುಗಳನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಬೇಕಿದೆ ಎಂದು ವಿವರಿಸಿದರು.
ಅರ್ಜಿದಾರರ ಕೋರಿಕೆ: ಅಲ್ಪಸಂಖ್ಯಾತರ ಆಯೋಗ ಸಲ್ಲಿಸಿರುವ ವಿಶೇಷ ವರದಿಯಲ್ಲಿನ ಶಿಫಾರಸುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರ ಮತ್ತು ರಾಜ್ಯ ವಕ್ಫ್ ಮಂಡಳಿಗೆ ನಿರ್ದೇಶಿಸಬೇಕು. ವರದಿಯಲ್ಲಿನ ಅಂಶಗಳನ್ನು ಆಧರಿಸಿ ಅಕ್ರಮಗಳು ಹಾಗೂ ಒತ್ತುವರಿಗಳ ತನಿಖೆಯನ್ನು ಸಿಬಿಐಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ತನಿಖೆಯ ಮೇಲ್ವಿಚಾರಣೆಯನ್ನು ಹೈಕೋರ್ಟ್ ಮಾಡಬೇಕು. 2016ರಲ್ಲಿ ಲೋಕಾಯುಕ್ತ ಸಂಸ್ಥೆಯು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಸೇರಿದಂತೆ ರಾಜ್ಯ ಸರ್ಕಾರ ಮತ್ತು ಲೋಕಾಯುಕ್ತ ಬಳಿ ಇರುವ ಎಲ್ಲ ದಾಖಲೆಗಳನ್ನು ನ್ಯಾಯಾಲಯ ತರಿಸಿಕೊಂಡು ಪರಿಶೀಲಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.