ಬೆಂಗಳೂರು: ಪಾರ್ಶ್ವವಾಯು ಸಂಬಂಧ ಜಾಗೃತಿ ಜಾಥಾವನ್ನು ಬೆಂಗಳೂರು ಪಾರ್ಶ್ವವಾಯು ಸೇವಾ ಸಂಘದಿಂದ ಇಂದು ನಡೆಸಲಾಯಿತು.
ನಗರದ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಿತ್ಯ ಒತ್ತಡದ ಜೀವನ ಕ್ರಮದಿಂದಾಗಿ ನರ ಹಾಗೂ ಮೆದುಳು ಸಂಬಂಧಿ ಕಾಯಿಲೆಗಳು ನಗರ ಜೀವನದಲ್ಲಿ ದಿನೇ ದಿನೇ ಹೆಚ್ಚಾಗುತ್ತಿವೆ. ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿಗೆ ಹೋಲಿಸಿದರೆ, ಮೆದುಳಿನ ಕಾಯಿಲೆಗಳು ಹಾಗೂ ಅದರ ಚಿಕಿತ್ಸೆ, ರೋಗ ನಿರೋಧಕ ಚಿಕಿತ್ಸೆ ಬಗ್ಗೆ ಜನರಿಗೆ ತಿಳುವಳಿಕೆ ಕಡಿಮೆ ಇದೆ. ಹೀಗಾಗಿ ಅಕ್ಟೋಬರ್ 29 ರಂದು ಪ್ರತೀ ವರ್ಷ ವಿಶ್ವ ಪಾರ್ಶ್ವವಾಯು ದಿನ ಆಚರಿಸಲಾಗುತ್ತದೆ. ಆದರೆ ಆ ದಿನಕ್ಕೂ ಮೊದಲೇ ಸೇವಾಸಂಘ ಸ್ಟ್ರೋಕ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದೆ.
ಪಾರ್ಶ್ವವಾಯು ಅಂದರೇನು ಎಂದು ಜನರಿಗೆ ತಿಳಿದಿದೆ. ಆದರೆ ಸಾಮಾನ್ಯರು ಕೂಡ ಪಾರ್ಶ್ವವಾಯು ಆದಾಗ ಗುರುತಿಸುವುದು ಹೇಗೆ ಎಂದು ತಜ್ಞರಾದ ಅಮಿತ್ ಕುಲಕರ್ಣಿ ಮಾಹಿತಿ ನೀಡಿದರು.
ಇದೇ ವೇಳೆ ಮಾತನಾಡಿದ ಸೇವಾ ಸಂಘದ ಅಧ್ಯಕ್ಷ ಹಾಗೂ ತಜ್ಞ ಸುಭಾಷ್, ಒಂದು ಸಮೀಕ್ಷೆ ಪ್ರಕಾರ ನಾಲ್ಕು ಜನರಲ್ಲಿ ಒಬ್ಬರಿಗೆ ಪಾರ್ಶ್ವವಾಯು ಸಂಭವಿಸುತ್ತದೆ. 2015 ರಿಂದ ನಮ್ಮ ಸಂಘದಿಂದ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್ ಭಾಗಿಯಾಗಿದ್ದರು. ಸ್ವತಃ ಪಾರ್ಶ್ವವಾಯುವಿಗೆ ತುತ್ತಾಗಿದ್ದ ನಟ ರಾಘವೇಂದ್ರ ರಾಜ್ಕುಮಾರ್ ಭಾಗಿಯಾಗಿ, ವಿದ್ಯಾರ್ಥಿಗಳ ಬಳಿ ತಮ್ಮ ಅನುಭವ ಹಂಚಿಕೊಂಡರು.