ಬೆಂಗಳೂರು : ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್, ಚುನಾವಣೆ ಒಮ್ಮೆ ಆರಂಭವಾದ ನಂತರ ಅದರಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು ಎಂದು ಸ್ಪಷ್ಟಪಡಿಸಿದೆ.
ಸಂಘದ ಸದಸ್ಯ ಸ್ಥಾನ ಮತ್ತು ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಟ್ಟಿರುವ ಸಂಘದ ಆಡಳಿತಾಧಿಕಾರಿ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಇದೇ ವೇಳೆ ಚುನಾವಣೆಯ ಫಲಿತಾಂಶ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರಲಿದೆ ಎಂದು ಸ್ಪಷ್ಟಪಡಿಸಿದೆ. ಇನ್ನು ಚುನಾವಣಾ ವೆಚ್ಚಕ್ಕೆ ಸಾಧ್ಯವಾದಷ್ಟು ಕಡಿವಾಣ ಹಾಕುವಂತೆ ಆಡಳಿತಾಧಿಕಾರಿಗೆ ನಿರ್ದೇಶಿಸಿದೆ.
ಸಂಘ ನಡೆಸುತ್ತಿರುವ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆ.ಸಿ ಜಯರಾಮ್ ಹಾಗೂ ಇತರರು ತಾವು ಸಂಘದ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದೇವೆಂಬ ಕಾರಣಕ್ಕೆ ಆಡಳಿತಾಧಿಕಾರಿ ಮತದಾರರ ಪಟ್ಟಿಯಿಂದ ಹಾಗೂ ಸಂಘದ ಸದಸ್ಯ ಸ್ಥಾನದಿಂದ ತಮ್ಮ ಹೆಸರು ತೆಗೆದುಹಾಕಿದ್ದಾರೆ.
ಹೀಗಾಗಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪುನರ್ಸ್ಥಾಪಿಸಬೇಕು. ಅಲ್ಲಿವರೆಗೂ ಚುನಾವಣೆಗೆ ತಡೆ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಪೀಠ, ಈ ಕುರಿತು ವಿವರಣೆ ನೀಡುವಂತೆ ಆಡಳಿತಾಧಿಕಾರಿಗೆ ನಿರ್ದೇಶಿಸಿತ್ತು. ಇದೇ ಡಿಸೆಂಬರ್ 12ರಂದು ಸಂಘಕ್ಕೆ ಚುನಾವಣೆ ನಡೆಯಲಿದೆ.