ಬೆಂಗಳೂರು: ವೇಗದಲ್ಲಿ ಬೆಳೆಯುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರಿಗೆ ದೂರದೃಷ್ಟಿಯ ಯೋಜನೆ ರೂಪಿಸಲು ವಿಷನ್ ಡಾಕ್ಯುಮೆಂಟ್ ತಯಾರು ಮಾಡಲಾಗುವುದು. ಯಾವ ರೀತಿ ಬೆಂಗಳೂರು ಬೆಳವಣಿಗೆಯಾಗಬೇಕು ಎಂದು ಯೋಜನಾಬದ್ಧವಾಗಿ ಕೆಲಸ ಮಾಡಲಾಗುವುದು. ಹಲವಾರು ಹೊಸ ಯೋಜನೆಗಳನ್ನು ರೂಪಿಸುವುದು ಅನಿವಾರ್ಯ ಹಾಗೂ ಅವಶ್ಯಕ. ನಮ್ಮ ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಉಲ್ಲಾಳ ಮತ್ತು ಅನ್ನಪೂರ್ಣೇಶ್ವರಿ ನಗರಗಳ ಮುಖ್ಯರಸ್ತೆಗೆ ಅಡ್ಡಲಾಗಿ ಕೆಂಗೇರಿ ಹೊರವರ್ತುಲ ರಸ್ತೆಯಿಂದ ಗ್ರೇಡ್ ಸೆಪರೇಟ್ ನಿರ್ಮಾಣದ ಕಾಮಗಾರಿ, ರಾ.ಹೆ.-ತುಮಕೂರು ರಸ್ತೆ ಜಂಕ್ಷನ್‍ನಿಂದ ನಾಯಂಡಹಳ್ಳಿ ಜಂಕ್ಷನ್‍ವರೆಗೆ (ಒ.ಆರ್.ಆರ್) ಮತ್ತು ಸುಮನಹಳ್ಳಿ ಜಂಕ್ಷನ್‍ನಿಂದ ಅಂಬೇಡ್ಕರ್ ಕಾಲೇಜುವರೆಗೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ, ಸೇತುವೆಗಳು ಮತ್ತು ಇತರ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯವನ್ನು ಸಿಎಂ ಬಸವರಾಜ ಬೊಮ್ಮಾಯಿ ನೆರವೇರಿಸಿ ಮಾತನಾಡಿದರು.
ಕಾನೂನುಬಾಹಿರವಾಗಿ ಫ್ಲೆಕ್ಸ್ ಹಾಕಲು ಅವಕಾಶವಿಲ್ಲ: ನಗರದ ಆರೋಗ್ಯ, ಸುರಕ್ಷತೆಗೆ ಫ್ಲೆಕ್ಸ್ ಒಳ್ಳೆಯದಲ್ಲ. ಇನ್ನು ಮುಂದೆ ಕಾನೂನುಬಾಹಿರವಾಗಿ ಫ್ಲೆಕ್ಸ್ ಹಾಕಲು ಅವಕಾಶ ನೀಡಬಾರದು ಎಂದು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದರು. ಜನ ಫ್ಲೆಕ್ಸ್ ಚಟ ಬಿಡಬೇಕು. ಪ್ಲಾಸ್ಟಿಕ್ ಉಪಯೋಗವನ್ನು ಆದಷ್ಟು ಕಡಿಮೆ ಮಾಡಬೇಕು ಎಂದರು. 250 ಕೋಟಿಗಿಂತ ಹೆಚ್ಚು ಕಾಮಗಾರಿಗಳ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದರಿಂದ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣದಿಂದ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಭದ್ರ ಬುನಾದಿ ಹಾಕಿ ಕಟ್ಟಿದ್ದಾರೆ. ಅವರು ಸ್ಥಾಪನೆ ಮಾಡುವಾಗ 200 ವರ್ಷಗಳವರೆಗೆ ಬೆಂಗಳೂರು ಹೇಗಿರಬೇಕೆಂಬ ಕಲ್ಪನೆಯಿಂದ ಕಟ್ಟಿದರು. ಇಷ್ಟು ಬೃಹತ್ ಮಟ್ಟದಲ್ಲಿ ಬೆಂಗಳೂರು ಬೆಳೆಯುತ್ತವೆ ಎಂದು ಯಾರೂ ಊಹಿಸಿರಲಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ಜನ ವಲಸೆ ಬಂದಿದ್ದಾರೆ. ನಿರಂತರವಾಗಿ ಈ ನಗರದಲ್ಲಿ ಅಭಿವೃದ್ಧಿ ಆಗಬೇಕು. ವಿಧಾನಸಭೆಗಿಂತ ಹೆಚ್ಚು ಸದಸ್ಯರು ಬಿಬಿಎಂಪಿಯಲ್ಲಿದ್ದಾರೆ. ಒಬ್ಬ ಆಯುಕ್ತರು ಇಷ್ಟು ದೊಡ್ಡ ಬೆಂಗಳೂರನ್ನು ನಿಭಾಯಿಸುವುದು ಅತ್ಯಂತ ಕಷ್ಟಸಾಧ್ಯ ಎಂದರು.
ಮೂರು ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ರಾಜಕಾಲುವೆಗಳ ಅಭಿವೃದ್ಧಿ ನಗರೋತ್ಥಾನ ಯೋಜನೆಗೆ ಸುಮಾರು 6 ಸಾವಿರ ಕೋಟಿ ರೂ.ಗಳ ಅನುದಾನ ಒದಗಿಸಿ, ಕಾರ್ಯವನ್ನು ಪ್ರಾರಂಭಿಸಲಾಗಿದೆ. ಏಪ್ರಿಲ್ನಲ್ಲಿ ಕೊಡುವ ಅನುದಾನವನ್ನು ಜನವರಿಯಲ್ಲಿ ನೀಡಿದ್ದರಿಂದ ಕೆಲಸಗಳು ಪ್ರಾರಂಭವಾಗಿವೆ.
ಒಟ್ಟು ಅನುದಾನದಲ್ಲಿ 3 ಸಾವಿರ ಕೋಟಿ ರೂ.ಗಳನ್ನು ರಸ್ತೆಗಳ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಇದಲ್ಲದೇ 1600 ಕೋಟಿ ರೂ.ಗಳನ್ನು ರಾಜಕಾಲುವೆಗಳ ಅಭಿವೃದ್ಧಿಯನ್ನು ವೈಜ್ಞಾನಿಕವಾಗಿ ಮಾಡಲಾಗುವುದು. ಈಗಾಗಲೇ ಕೆಲಸ ಪ್ರಾರಂಭಿಸಲಾಗಿದೆ. ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡಿರುವುದನ್ನು ಗುರುತಿಸಿ ತೆಗೆದುಹಾಕಲು ಟಾಸ್ಕ್ ಫೋರ್ಸ್‍ಗಳನ್ನು ರಚಿಸಲಾಗಿದೆ. ಬಡವರಿಗೆ ಪರ್ಯಾಯ ಸ್ಥಳ ನೀಡಿ, ಉಳಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಅಲಿಖಿತ ಒಪ್ಪಂದ: ಮೆಟ್ರೋ ಎರಡನೇ ಹಂತದ ಕಾಮಗಾರಿಗೆ ವೇಗ ನೀಡಿ 2024ಕ್ಕೆ ಯೋಜನೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. 15,000 ಕೋಟಿ ರೂ.ಗಳ ಸಬ್ ಅರ್ಬನ್ ರೈಲು ಯೋಜನೆಗೆ ಪ್ರಧಾನಿಗಳಿಂದ 21ನೇ ತಾರೀಖು ಶಂಕುಸ್ಥಾಪನೆ ನೆರವೇರಲಿದೆ. ಪೆರಿಫೆರಲ್ ರಿಂಗ್ ರೋಡ್ಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ.
ಬೆಂಗಳೂರಿನ ಅಭಿವೃದ್ಧಿಗೆ ದೂರದೃಷ್ಟಿ ಇಟ್ಟುಕೊಂಡು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಬೆಂಗಳೂರಿನ ಬಗ್ಗೆ ಹಲವಾರು ಪ್ರಮುಖ ನಿರ್ಧಾರಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು. ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಅವರಿಗೆ ಅಭಿವೃದ್ಧಿಯ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ರಾಜಕಾರಣದಲ್ಲೂ ಅಲಿಖಿತ ಒಪ್ಪಂದ ಮಾಡಿಕೊಳ್ಳಬೇಕು.
59 ತಿಂಗಳು ಅಭಿವೃದ್ಧಿ ಮಾಡಿ ಒಂದು ತಿಂಗಳು ರಾಜಕಾರಣ ಮಾಡೋಣ. ಒಳ್ಳೆ ಕೆಲಸ ಮಾಡಿದ್ದರೆ ಜನ ಪುರಸ್ಕರಿಸುತ್ತಾರೆ. ಜನ ಮಾಲೀಕರು, ನಾವು ಸೇವಕರು. ರಾಜ್ಯದ ಅಭಿವೃದ್ಧಿಗೆ ಗುರುತರ ಜವಾಬ್ದಾರಿಯನ್ನು ಜನ ಕೊಟ್ಟಿದ್ದಾರೆ. ಅಧಿಕಾರವೆಂದರೆ ಜವಾಬ್ದಾರಿ. ಅದನ್ನು ಅರಿತು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
(ಇದನ್ನೂ ಓದಿ: ಆರಂಭದಲ್ಲೇ ಭರಪೂರ ವಾಣಿಜ್ಯ ತೆರಿಗೆ: ಎರಡೇ ತಿಂಗಳಲ್ಲಿ ಬೊಕ್ಕಸಕ್ಕೆ 18 ಸಾವಿರ ಕೋಟಿ ಸಂಗ್ರಹ)