ಬೆಂಗಳೂರು: ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ನಿನ್ನೆ ಕಬ್ಬನ್ ಪಾರ್ಕ್ನಿಂದ ಜಾಥಾ ನಡೆಸಲಾಗಿತ್ತು. ಆದರೆ ಈಗ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದಿಂದ ಈ ಜಾಥಾಗೆ ಭಾರೀ ವಿರೋಧ ವಕ್ತವಾಗಿದೆ.
ಹೌದು, ಭಾನುವಾರದಂದು ಕಬ್ಬನ್ ಪಾರ್ಕ್ನಲ್ಲಿ ವಾಹನಗಳ ಸಂಚಾರಕ್ಕೆ ಪ್ರವೇಶ ನಿಷೇಧ ಮಾಡಲಾಗಿದೆ. ಈ ಮೂಲಕ ಕಬ್ಬನ್ ಪಾರ್ಕ್ನಲ್ಲಿ ತಕ್ಕ ಮಟ್ಟಿಗಾದರೂ ವಾಯು ಮಾಲಿನ್ಯ ಪ್ರಮಾಣ ಕಡಿಮೆ ಮಾಡುವುದು, ಜೊತೆಗೆ ನೂರಕ್ಕೂ ಹೆಚ್ಚು ಬಗೆಯ ಪಕ್ಷಿಗಳಿಗೆ ವಾಹನಗಳ ಹಾರನ್ ಕಿರಿಕಿರಿ ತಪ್ಪಿಸುವ ಉದ್ದೇಶದಿಂದಲೇ ಪ್ರತಿ ಭಾನುವಾರವೂ ಸೇರಿದಂತೆ ಸರ್ಕಾರಿ ರಜಾ ದಿನಗಳಲ್ಲಿ ವಾಹನ ನಿಷೇಧ ಮಾಡಲಾಗಿದೆ. ಆದರೆ ನಿನ್ನೆ ವನ್ಯಜೀವಿ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಂಟೇಜ್ ಕಾರು ಜಾಥಾ ನಡೆಸಲಾಗಿತ್ತು. ಇದನ್ನ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ವಿರೋಧಿಸಿದೆ.
ಈ ರೀತಿ ವಾಹನಗಳಿಗೆ ನಿಷೇಧ ಇರುವಾಗ ಜಾಥಾ ಹೆಸರಲ್ಲಿ ಭಾನುವಾರವೂ ಸಹ ಕಾರುಗಳ ಸಂಚಾರ ಮಾಡಿರುವುದು ಕಾನೂನು ಬಾಹಿರ. ಕಬ್ಬನ್ ಪಾರ್ಕ್ ಒಳಗೆ ಜಾಥಾ ನಡೆಸಲು ಅರಣ್ಯ ಇಲಾಖೆಯೇನೋ ತೋಟಗಾರಿಕೆ ಇಲಾಖೆಯಿಂದ ಅನುಮತಿ ಪಡೆದಿದೆ. ಆದರೆ ಈ ರೀತಿ ಮನಸೋ ಇಚ್ಛೆ ಅನುಮತಿ ನೀಡಿರುವುದು, ಅಧಿಕಾರ ದುರಪಯೋಗ ಮಾಡಿಕೊಂಡಿರುವುದು ಖಂಡನೀಯ ಎಂದು ನಡಿಗೆದಾರದ ಸಂಘದ ಅಧ್ಯಕ್ಷ ಉಮೇಶ್ ಕಿಡಿಕಾರಿದ್ದಾರೆ.
ಈ ಕುರಿತಂತೆ ಕಾನೂನು ಹೋರಾಟ ಮಾಡಲಾಗುವುದು. ಕಬ್ಬನ್ ಪಾರ್ಕ್ ಹಾಳು ಮಾಡುವ ಕೆಲಸ ಮಾಡಬಾರದು. ಸರ್ಕಾರಿ ಅಥವಾ ಖಾಸಗಿ ಯಾವುದೇ ಕಾರ್ಯಕ್ರಮ ಆಗಲಿ ವಾಹನಗಳನ್ನ ತಂದು ಅಲ್ಲಿ ಜಾಥಾ ಮಾಡುವ ಅವಶ್ಯಕತೆ ಇರಲಿಲ್ಲ ಅಂತಾ ವಾಗ್ದಾಳಿ ನಡೆಸಿದರು. ಕಬ್ಬನ್ ಪಾರ್ಕ್ ಒಳಗೆ ವಿಂಟೇಜ್ ಕಾರು ತಂದರೆ ವನ್ಯಜೀವಿ ಉಳಿಸಿದ ಹಾಗೆ ಆಗುತ್ತಾ ಅಂತಾ ಪ್ರಶ್ನೆ ಮಾಡಿದರು.