ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಬಗ್ಗೆ ಎಲ್ಲರೂ ಸೇರಿ ಒಗ್ಗಟ್ಟಾಗಿ ಒಂದು ತೀರ್ಮಾನ ಕೈಗೊಂಡರೆ ಒಳ್ಳೆಯದು ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ತಿಳಿಸಿದ್ದಾರೆ.
ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಂಚಪೀಠಗಳನ್ನು ಒಳಗೊಂಡ ಪ್ರತ್ಯೇಕ ಲಿಂಗಾಯತ ಧರ್ಮ ಆದರೆ ಒಳ್ಳೆಯದು. ಈ ವಿಚಾರ ನನ್ನ ಗಮನಕ್ಕೆ ಇಲ್ಲ. ನಾನು ಎಲ್ಲಿಯೂ ಭಾಗಿಯಾಗಿಲ್ಲ. ಎಲ್ಲರೂ ಒಟ್ಟಾಗಿ ಈ ಸಂಬಂಧ ಒಂದು ನಿರ್ಧಾರ ಕೈಗೊಂಡರೆ ಒಳ್ಳೆಯದು. ಇದು ಒಳ್ಳೆಯ ಬೆಳವಣಿಗೆಯಾಗಿದ್ದು ನನಗೂ ಸಂತೋಷ ತಂದಿದೆ ಎಂದರು.
ಯಾವುದೇ ರಾಜಕೀಯ ಲಾಭಕ್ಕಾಗಿ ಧರ್ಮದ ಹೋರಾಟ ಮಾಡ್ತಿಲ್ಲ. ಇದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನುಕೂಲ ಸಿಗಲಿದೆ ಎಂಬ ವಿಚಾರದ ಮೇಲೆ ನಡೆಯುತ್ತಿರುವ ಸೀಮಿತ ಹೋರಾಟ. ರಾಜಕೀಯ ನಾಯಕರ ನಿಜವಾದ ಕಳಕಳಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವುದು ಆಗಿರುತ್ತದೆ. ಕೆಲವರು ಈ ಕ್ಷೇತ್ರಕ್ಕೆ ಹಣಗಳಿಕೆಗೆ ಬಂದಿರಬಹುದು. ಆದರೆ ಹೆಚ್ಚಿನವರಿಗೆ ಸಮಾಜ ಹಾಗೂ ಜನರ ಬಗ್ಗೆ ಕಾಳಜಿ ಇರುತ್ತದೆ ಎಂದು ವಿನಯ್ ಕುಲಕರ್ಣಿ ಹೇಳಿದರು.
ಇದನ್ನೂ ಓದಿ: ಲಿಂಗಾಯತ ಪ್ರತ್ಯೇಕ ಧರ್ಮವಾದರೆ, ಎಲ್ಲರಿಗೂ ಮೀಸಲಾತಿ ಸಿಗುತ್ತೆ: ಎಂ.ಬಿ.ಪಾಟೀಲ್
ಎಂ.ಬಿ.ಪಾಟೀಲ್ ಹೇಳಿಕೆ ನನಗೆ ಗೊತ್ತಿಲ್ಲ. ಈ ಬಾರಿ ನಾನು ಯಾವುದೇ ಹೋರಾಟದಲ್ಲಿ ಭಾಗವಹಿಸೋದಿಲ್ಲ. ಸದ್ಯ ನನ್ನದೇ ಆದ ವೈಯಕ್ತಿಕ ಕಾರಣಗಳಿಂದಾಗಿ ಯಾವುದೇ ಸಭೆಗಳಲ್ಲಿ ನಾನು ಪಾಲ್ಗೊಳ್ಳುತ್ತಿಲ್ಲ. ಸಮಾಜಕ್ಕೆ ಅನುಕೂಲವಾಗುವ ಯಾವುದೇ ತೀರ್ಮಾನವನ್ನು ನಾವು ಬೆಂಬಲಿಸುತ್ತೇವೆ. ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ನಡೆಸಿದ ಹೋರಾಟವೇ ಕಳೆದ ಚುನಾವಣೆಯಲ್ಲಿ ನಮ್ಮ ಸೋಲಿಗೆ ಪ್ರಮುಖ ಕಾರಣವಲ್ಲ. ಅದಕ್ಕೆ ಬೇರೆ ಬೇರೆ ಕಾರಣ ಇದೆ ಎಂದು ಅವರು ತಿಳಿಸಿದರು.