ಬೆಂಗಳೂರು : ಎರಡು ತಿಂಗಳ ಲಾಕ್‌ಡೌನ್ ನಂತರ ಒಂದಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಹೋಟೆಲ್‌ಗಳು ಗ್ರಾಹಕರಿಗೆ ಸೇವೆ ನೀಡುವಂತೆ ಸರ್ಕಾರ ಆದೇಶ ನೀಡಿದೆ. ನಾಳೆಯಿಂದ ರಾಜ್ಯದ ಹೋಟೆಲ್‌ಗಳು ಓಪನ್ ಆಗಲಿವೆ.
ಸರ್ಕಾರದ ಆದೇಶ ಪಾಲಿಸಿ ಕೊರೊನಾ ನಂತರ ಎಂದಿನಂತೆ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಗಾಂಧಿಬಜಾರ್‌ನ 'ವಿದ್ಯಾರ್ಥಿ ಭವನ' ಹೊಸ ಐಡಿಯಾ ಬಳಸಿದೆ. ವೈರಸ್ ಹರಡದಂತೆ ತಡಯಬೇಕಾದರೆ ಸಾಮಾಜಿಕ ಅಂತರ ಬಹು ಮುಖ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಭವನ ಹೋಟೆಲ್‌ನಲ್ಲಿ ಹೊಸ ರೀತಿಯ ಆಸನದ ವ್ಯವಸ್ಥೆ ಮಾಡಿದ್ದಾರೆ. ಒಂದು ಟೇಬಲ್‌ನಲ್ಲಿ ಒಬ್ಬ ಗ್ರಾಹಕರಿಂದ ಮತ್ತೊಬ್ಬ ಗ್ರಾಹಕರಿಗೆ ಸಂಪರ್ಕ ಆಗದಂತೆ, ಟೇಬಲ್ ಮಧ್ಯೆ ಫೈಬರ್ ಗ್ಲಾಸ್ ಪರದೆ ಹಾಕಿದ್ದಾರೆ. ಇದರಿಂದ ಗ್ರಾಹಕರ ನಡುವೆ ಆರೋಗ್ಯಕರ ಅಂತರ ಕಾಯ್ದು ಕೊಳ್ಳಲು ಸುಲಭವಾಗುತ್ತದೆ.
ಈ ಹೊಸ ಟೇಬಲ್ ವ್ಯವಸ್ಥೆ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ ವಿದ್ಯಾರ್ಥಿ ಭವನ ಹೋಟೆಲ್ ಮಾಲೀಕ ಅರುಣ್ ಅಡಿಗ ಅವರು, ಒಂಟಿಯಾಗಿ ಬಂದ ಗ್ರಾಹಕರು ಬೇರೆಯವರ ಜೊತೆ ಟೇಬಲ್‌ನಲ್ಲಿ ಕೂರಲು ಭಯ ಪಡುತ್ತಾರೆ. ಆ ನಿಟ್ಟಿನಲ್ಲಿ ಈಗ ನಮ್ಮ ಹೋಟೆಲ್‌ನಲ್ಲಿ ಹೊಸ ಟೇಬಲ್ ವ್ಯವಸ್ಥೆ ಮಾಡಿದ್ದೇವೆ. ಸದ್ಯ ಹತ್ತು ಟೇಬಲ್‌ಗಳಿಗೆ ಈ ರೀತಿ ಪ್ರಯೋಗಮಾಡಿದ್ದೇವೆ. ಅಲ್ಲದೆ ಸರ್ಕಾರದ ಆದೇಶದಂತೆ ಕೇವಲ ಶೇ.50%ರಷ್ಟು ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಒಂದಷ್ಟು ಟೇಬಲ್ ಗಳನ್ನು ತೆಗೆಸಿದ್ದೇವೆ. ಇದರಿಂದ ಗ್ರಾಹಕರಿಗೆ ತೊಂದರೆ ಆಗುತ್ತೆ.
ಆದರೆ, ಪರಿಸ್ಥಿತಿ ಅರ್ಥಮಾಡಿಕೊಂಡು ಗ್ರಾಹಕರು ನಮಗೆ ಸಹಕರಿಸಬೇಕು. ತುಂಬಾ ಅವಶ್ಯಕತೆ ಇರುವವರು ಹೋಟೇಲ್‌ನಲ್ಲಿ ಬಂದು ತಿಂದರೆ ಉತ್ತಮ. ಅಲ್ಲದೆ ಗ್ರಾಹಕರು ಒಂದಷ್ಟು ದಿನಗಳ ಮಟ್ಟಿಗೆ ಪಾರ್ಸಲ್‌ಗೆ ಆದ್ಯತೆ ಕೊಟ್ಟರೆ ಉತ್ತಮ ಎಂದರು. ಅಲ್ಲದೆ ಸದ್ಯದ ಪರಿಸ್ಥಿತಿಯಲ್ಲಿ ಹೋಟೆಲ್ ಉದ್ಯಮ ಸಂಕಷ್ಟದಲ್ಲಿದೆ. ಮೊದಲಿನಂತೆ ಚೇತರಿಕೆ ಕಾಣಲು ತಮಗೆ ಇನ್ನೂ 5 ರಿಂದ 6 ತಿಂಗಳು ಬೇಕಾಗಬಹುದು ಎಂದರು.