ಬೆಂಗಳೂರು: ಲಾಕ್ಡೌನ್ ಕಾರಣ ಬೆಂಗಳೂರಿನಲ್ಲಿ ಬಸ್ ಸಂಚಾರ ಇಲ್ಲ. ತುರ್ತು ಸೇವೆ ಮಾಡುವ ಸಿಬ್ಬಂದಿ ಸಂಚಾರಕ್ಕೆ ಬಿಎಂಟಿಸಿ ಬಸ್ ಸೇವೆ ಒದಗಿಸಲಾಗುತ್ತಿದೆ. ಆದರೆ ಆ ಬಸ್ಗಳ ಸೇವೆ ಪಡೆಯುವ ಭಾಗ್ಯ ವಿಧಾನಸೌಧದ ಡಿ ದರ್ಜೆ ನೌಕರರಿಗಿಲ್ಲ. ಪ್ರತಿ ದಿನವೂ ಕಿಲೋ ಮೀಟರ್ಗಟ್ಟಲೆ ನಡೆದು ಇವರು ಕೆಲಸಕ್ಕೆ ಬರುವಂತಾಗಿದೆ.
ವಿಧಾನಸೌಧದ ಆವರಣ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಸುಡು ಬಿಸಿಲಿದ್ದರೂ ಉದ್ಯಾನವನ ಹಸಿರ ಸಿರಿ ಹೊದ್ದು ನಿಂತಿದೆ ಎಂದರೆ ಉದ್ಯಾನವನ ನಿರ್ವಹಣೆ ಮಾಡುವ ಡಿ ದರ್ಜೆ ನೌಕರರೇ ಕಾರಣ. ಲಾಕ್ಡೌನ್ ಇದ್ದರೂ ಈ ಸಿಬ್ಬಂದಿ ಪ್ರತಿದಿನ ಕೆಲಸಕ್ಕೆ ಕಡ್ಡಾಯವಾಗಿ ಹಾಜರಾಗಲೇಬೇಕು. ಉದ್ಯಾನವನ ಸೇರಿದಂತೆ ಆವರಣವನ್ನು ಸ್ವಚ್ಛವಾಗಿರಿಸಬೇಕು, ನೀರು ಹಾಯಿಸಬೇಕು. ಇದಕ್ಕಾಗಿ 10 ಮಂದಿ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಇವರೊಂದಿಗೆ ವಿಧಾನಸೌಧ ಕಟ್ಟಡವನ್ನು ಶುಚಿಗೊಳಿಸುವ ಕೆಲಸ ಮಾಡುತ್ತಿರುವ ಡಿ ದರ್ಜೆ ನೌಕರರು ಕೂಡಾ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಕಳೆದ 3-4 ದಿನಗಳಿಂದ ಇವರ ಗೋಳು ಯಾರಿಗೂ ಹೇಳದಂತಾಗಿದೆ.
ವಿಧಾನಸೌಧದಿಂದ ಸಾಕಷ್ಟು ದೂರದ ಮಾಗಡಿ ರಸ್ತೆ ಹಾಗೂ ಇನ್ನಿತರ ಕಡೆಗಳಲ್ಲಿ ವಾಸವಾಗಿರುವ ಈ ಸಿಬ್ಬಂದಿಗೆ ತುರ್ತು ಸೇವೆ ಸಿಬ್ಬಂದಿ ಸಂಚಾರಕ್ಕೆ ಅವಕಾಶ ಕಲ್ಪಿಸಿ ನಗರದಲ್ಲಿ ಸಂಚರಿಸುತ್ತಿರುವ ಬಿಎಂಟಿಸಿ ಬಸ್ಗಳಲ್ಲಿ ಸಂಚರಿಸಲು ನಿರ್ಬಂಧಿಸಲಾಗಿದೆ. ಐಡಿ ಕಾರ್ಡ್ ತೋರಿಸಿದರೂ ಬಸ್ ಹತ್ತಿಸಿಕೊಳ್ಳುತ್ತಿಲ್ಲ. ಬಡವರಾದ ಇವರ ಬಳಿ ಸ್ವಂತ ವಾಹನ ವ್ಯವಸ್ಥೆ ಕೂಡಾ ಇಲ್ಲ. ಪ್ರತಿದಿನ ವಿಧಾನಸೌಧಕ್ಕೆ ಕೆಲಸಕ್ಕೆ ತೆರಳಲು ಹಾಗೂ ವಾಪಸ್ ಮನೆಗೆ ಹೋಗಲು ಇವರೆಲ್ಲಾ ಕಾಲುಗಳನ್ನೇ ಅವಲಂಬಿಸಬೇಕಿದೆ. ಬಸ್ ಬಿಟ್ಟರೆ ಬೇರೆ ಯಾವುದೇ ವಾಹನಗಳ ವ್ಯವಸ್ಥೆ ಇಲ್ಲ. ರಜೆ ಕೂಡಾ ಇಲ್ಲ, ಕಡ್ಡಾವಾಗಿ ಕೆಲಸಕ್ಕೆ ಹಾಜರಾಗಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ. ಆದ ಕಾರಣ ಎಷ್ಟು ದೂರ ಆದರೂ ನಡೆದೇ ಬರಬೇಕು ಎಂದು ಮಹಿಳಾ ಸಿಬ್ಬಂದಿಯೊಬ್ಬರು ತಮ್ಮ ಅಳಲು ತೋಡಿಕೊಂಡರು. ಪ್ರತಿದಿನ ನಡೆದು ಬರುವ ಯಮಯಾತನೆಯನ್ನು ನೆನೆದು ಗದ್ಗರಿತರಾದರು.
ಕೆಲಸ ಮಾಡಿ ಎಂದು ಒತ್ತಡ ಹೇರುವ ಅಧಿಕಾರಿಗಳ ಮುಂದೆ, ಬಸ್ನಲ್ಲಿ ನಮ್ಮನ್ನು ಹತ್ತಿಸಿಕೊಳ್ಳುತ್ತಿಲ್ಲ, ಓಡಾಟ ಕಷ್ಟವಾಗಿದೆ, ನಮಗೂ ತುರ್ತು ಸೇವೆ ಸಲ್ಲಿಸುವವರ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿರುವ ಬಸ್ಗಳಲ್ಲಿ ಹತ್ತಿಸಿಕೊಳ್ಳುವಂತೆ ಸೂಚನೆ ನೀಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದರೂ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸಿಲ್ಲ, ಸಚಿವರ ಮುಂದೆ ಅಳಲು ತೋಡಿಕೊಂಡರೂ ಸಮಸ್ಯೆ ಪರಿಹಾರವಾಗಿಲ್ಲ ಎನ್ನುತ್ತಾರೆ ಈ ಸಿಬ್ಬಂದಿ. ಒಟ್ಟಿನಲ್ಲಿ ಈ ನೌಕರರು ಕಣ್ಣೀರು ಹಾಕುತ್ತಲೇ ಕೆಲಸ ಮಾಡಿ ಮನೆಗೆ ಹೋಗುತ್ತಿದ್ದರೂ ಅಧಿಕಾರಿಗಳಿಗೆ ಮಾತ್ರ ಕರುಣೆ ಇಲ್ಲ.. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಡಿ ದರ್ಜೆ ನೌಕರರ ಸಂಚಾರಕ್ಕೆ ಬಿಎಂಟಿಸಿ ಬಸ್ಗಳಲ್ಲಿ ಅವಕಾಶ ನೀಡುವ ವ್ಯವಸ್ಥೆ ಇಲ್ಲವೇ ಲಾಕ್ಡೌನ್ ಮುಗಿಯುವವರೆಗೂ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕಿದೆ.