ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಕಲಾಬ್ರಹ್ಮ ಗುಬ್ಬಿ ವೀರಣ್ಣ ಅವರ ಪುತ್ರಿ, ನಟಿ ಜಿ.ವಿ. ಹೇಮಲತಾ(75) ಅವರು ಹೃದಯಾಘಾತದಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತದೇಹವನ್ನ ಆಸ್ಪತ್ರೆಗೆ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ಜಿ.ವಿ. ಹೇಮಲತಾ ಅವರಿಗೆ ಲಘು ಹೃದಯಾಘಾತವಾಗಿದ್ದು, ಅವರನ್ನು ಬಾಶೆಟ್ಟಿಹಳ್ಳಿ ಸಮೀಪದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇಂದು ಚಿಕಿತ್ಸೆಗೆ ಸ್ಪಂದಿಸದೇ ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತ ಹೇಮಲತಾ ಅವರು ಕಳೆದ ಐದು ವರ್ಷಗಳಿಂದ ನಗರದ ಸೋಮೇಶ್ವರ ಬಡಾವಣೆಯಲ್ಲಿ ವಾಸವಾಗಿದ್ದರು. ಇವರು ಗುಬ್ಬಿ ವೀರಣ್ಣನವರ ಮಗ ಗುರುಸ್ವಾಮಿ ಅವರ ಪುತ್ರಿ ಟಿಎಪಿಎಂಸಿಎಸ್ ಮಾಜಿ ನಿರ್ದೇಶಕಿ ಜಯಭಾರತಿ ಅವರ ಮನೆಯಲ್ಲಿದ್ದರು. ಹೇಮಲತಾ ಅವರು ನಾಲ್ಕೈದು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ರಾಜಕುಮಾರ್ ಜೊತೆ ಎಮ್ಮೆತಮ್ಮಣ್ಣ ಚಿತ್ರದಲ್ಲಿ, ಕಲ್ಯಾಣ್ ಕುಮಾರ್ ಜೊತೆ ಕಲಾವತಿ ಚಿತ್ರ ಹಾಗೂ ಉದಯ್ಕುಮಾರ್ ಅವರ ಚಿತ್ರದಲ್ಲೂ ನಾಯಕ ನಟಿಯಾಗಿ ಅಭಿನಯಿಸಿದ್ದರು.
ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ, ನಾಲ್ವರು ಮೊಮ್ಮಕ್ಕಳಿದ್ದಾರೆ. ಹೇಮಲತಾ ಅವರ ಮೂವರು ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದಾರೆ. ಇತ್ತೀಚೆಗಷ್ಟೇ ಹೇಮಲತಾ ಅವರು ಅಮೆರಿಕಕ್ಕೆ ಹೋಗಿ ಬಂದಿದ್ದರು. ಮೃತದೇಹವನ್ನು ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಮೆಡಿಕಲ್ ಆಸ್ಪತ್ರೆಗೆ ದಾನ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿರ್ದೇಶಕ ಪ್ರೀತಂ ಗುಬ್ಬಿ ಸೇರಿದಂತೆ ಹಲವು ರಂಗಭೂಮಿಯ ಗಣ್ಯರು ಸೋಮೇಶ್ವರ ಬಡಾವಣೆಯಲ್ಲಿ ಮೃತರ ಅಂತಿಮ ದರ್ಶನ ಪಡೆದರು. ಹಿರಿಯ ರಂಗ ಕಲಾವಿದೆ ಬಿ.ಜಯಶ್ರೀ ಹಾಗೂ ಹಲವು ಗಣ್ಯರು ಸಪ್ತಗಿರಿ ಆಸ್ಪತ್ರೆಯಲ್ಲಿ ಅಂತಿಮ ದರ್ಶನ ಪಡೆಯಲಿದ್ದಾರೆ.
(ಇದನ್ನೂ ಓದಿ: ಅವಘಡದ ಬಳಿಕ ಮೊದಲ ವಿಡಿಯೋ.. ನಟ ದಿಗಂತ್ ಹೇಳಿದ್ದೇನು?)