ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾವನ್ನು ಚಿತ್ರಮಂದಿರಗಳಿಂದ ತೆಗೆದು ಹಾಕಲಾಗುತ್ತದೆ. ಆ ಚಿತ್ರಮಂದಿರಗಳಲ್ಲಿ 'ಆರ್ಆರ್ಆರ್' ಸಿನಿಮಾ ಹಾಕಲು ಪಿತೂರಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.
ನಗರದ ತ್ರಿವೇಣಿ ಚಿತ್ರಮಂದಿರ ಬಳಿ ರಸ್ತೆ ಮೇಲೆ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, 'ಜೇಮ್ಸ್' ಸಿನಿಮಾ ತೆಗೆಯಬಾರದು. ತೆಗೆಯಬೇಕು ಅನ್ನೋದೇ ಅಕ್ಷಮ್ಯ ಅಪರಾಧ. ಚಿತ್ರ ತೆಗೆದರೆ ಕರ್ನಾಟಕದಲ್ಲಿ ಕಂಡರಿಯದ ರೀತಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಪರಭಾಷಾ ಚಿತ್ರಗಳು ಕನ್ನಡ ನಾಡಲ್ಲಿ ಬೇಡ. ಆರ್ಆರ್ಆರ್ ಸಿನಿಮಾ ಪ್ರೀ ರಿಲೀಸ್ ಇವೆಂಟ್ ಚಿಕ್ಕಬಳ್ಳಾಪುರದಲ್ಲಿ ಏನು ವೈಭವದಿಂದ ಮಾಡಿದರು. ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಮಾತ್ರ ಆದ್ಯತೆ ಕೊಡಿ. ಮೊದಲು ಹಿಮಾಲಯ ಟಾಕೀಸ್ ಇತ್ತು. ಆಗ ರಾಜ್ ಕುಮಾರ್ ರಣಧೀರ ಕಂಠೀರವ ಚಿತ್ರಕ್ಕೆ ಥಿಯೇಟರ್ ಇರಲಿಲ್ಲ. ನಾನು ಹೋರಾಟ ಮಾಡಿ ಥಿಯೇಟರ್ ಕೊಟ್ಟೆ ಎಂದರು.
ಈ ಹಿಂದೆ ಬಂಗಾರದ ಮನುಷ್ಯ ಸಿನಿಮಾ ತೆಗೆಯಲು ಹುನ್ನಾರ ಮಾಡಿದರು. ಆಗಲೂ ನಾನು ಹೋರಾಟ ಮಾಡಿದ್ದೇನೆ. ಇವತ್ತು ಸಾಕಷ್ಟು ಚಿತ್ರಮಂದಿರಗಳಲ್ಲಿ 'ಜೇಮ್ಸ್' ಸಿನಿಮಾ ತೆಗೆಯುವ ಹಿಂದೆ ಭಾರಿ ಪಿತೂರಿ ನಡೆಯುತ್ತಿದೆ. ಈಗ ಕೂಡ ಹೋರಾಟ ಮಾಡುತ್ತೇವೆ ಅಂತಾ ವಾಟಾಳ್ ನಾಗರಾಜ್ ಹೇಳಿದರು.
ಇದನ್ನೂ ಓದಿ: 'ಕಾಶ್ಮೀರ್ ಫೈಲ್ಸ್' ಬಿಜೆಪಿ ಅಜೆಂಡಾ ಮೇಲೆ ಮಾಡಿದ ಸಿನಿಮಾ: ಪುನೀತ್ ಕೊನೆಯ ಚಿತ್ರಕ್ಕೆ ತೊಂದರೆ ಸರಿಯಲ್ಲ ಎಂದ ಡಿಕೆಶಿ