ಬೆಂಗಳೂರು: ವಸಿಷ್ಠ ಕೋ ಅಪರೇಟಿವ್ ಬ್ಯಾಂಕ್ ವಂಚನೆ ಆರೋಪ ಪ್ರಕರಣದಲ್ಲಿ ಎಂಟು ಮಂದಿ ಡೈರೆಕ್ಟರ್ಸ್ ವಿಚಾರಣೆ ಮಾಡಲು ಹನುಮಂತನಗರ ಪೊಲೀಸರು ಮುಂದಾಗಿದ್ದಾರೆ. ಕಳೆದ ಶುಕ್ರವಾರವಷ್ಟೇ ಎಂಟು ಮಂದಿ ಡೈರೆಕ್ಟರ್ಸ್ ಮನೆ, ಕಚೇರಿ ಮೇಲೆ ರೇಡ್ ಮಾಡಿ ಸರ್ಚ್ ಮಾಡಿದ್ದ ಹನುಮಂತ ನಗರ ಪೊಲೀಸರು, ಈ ವೇಳೆ ಕೆಲವು ದಾಖಲೆಗಳನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು.
ಐದು ಮಂದಿ ಬ್ಯಾಂಕ್ ನಿರ್ದೇಶಕರು ರಾಜೀನಾಮೆ ನೀಡಿರುವ ದಾಖಲಾತಿ ನೀಡಿದ್ದರು. ಹೀಗಿದ್ದರೂ ಅವರಿದ್ದ ಅವಧಿಯಲ್ಲಿ ಬ್ಯಾಂಕ್ ವಹಿವಾಟಿನ ಮಾಹಿತಿ ಕಲೆ ಹಾಕಲು ಮುಂದಾಗಿರುವ ಪೊಲೀಸರು, ಇಂದು ಅಥವಾ ನಾಳೆ ರಿಜಿಸ್ಟರ್ ಆಫ್ ಕೋ ಅಪರೇಟಿವ್ನಿಂದ ಆಡಿಟ್ ರಿಪೋರ್ಟ್ ಬರುವ ಸಾಧ್ಯತೆ ಇದೆ.
ಶುಕ್ರವಾರದ ಬೆಳವಣಿಗೆ:
ವಸಿಷ್ಠ ಕೋ ಆಪರೇಟಿವ್ ಸೊಸೈಟಿಯಲ್ಲಿನ ವಂಚನೆ ಆರೋಪ ಪ್ರಕರಣ ಸಂಬಂಧ ಬ್ಯಾಂಕ್ ನಿರ್ದೇಶಕರು ಹಾಗೂ ವ್ಯವಸ್ಥಾಪಕರ ಮನೆಗಳ ಮೇಲೆ ಹನುಮಂತನಗರ ಪೊಲೀಸರು ಕಳೆದ ಶುಕ್ರವಾರ ದಾಳಿ ನಡೆಸಿದ್ದರು. ಗಿರಿನಗರ, ಶಂಕರಪುರ, ಹನುಮಂತನಗರ ಸೇರಿದಂತೆ ಏಕಕಾಲದಲ್ಲಿ 11 ಕಡೆಗಳಲ್ಲಿ ವಾರೆಂಟ್ ಪಡೆದು ದಾಳಿ ನಡೆಸಲಾಗಿತ್ತು. ಬ್ಯಾಂಕ್‌ಗೆ ಸಂಬಂಧಿಸಿದ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಪ್ರಕರಣ/ವಿಚಾರಣೆ:
ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ವೆಂಕಟನಾರಾಯಣ ಹಾಗೂ ಕೃಷ್ಣಪ್ರಸಾದ್ ಸೇರಿದಂತೆ ಹಲವರ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಹಣ ದುರ್ಬಳಕೆ ಮಾಡಿಲ್ಲ ಎಂದು ಆರೋಪಿಗಳು ವಿಚಾರಣೆಯಲ್ಲಿ ತನಿಖಾಧಿಕಾರಿಗಳ ಮುಂದೆ ಸಮಜಾಯಿಷಿ ನೀಡಿದ್ದರು. ಬ್ಯಾಂಕಿನಲ್ಲಿ 289 ಕೋಟಿ ರೂ. ಹೂಡಿಕೆಯಾಗಿದೆ. ಅದರಲ್ಲಿ 254 ಕೋಟಿ ಸಾಲವನ್ನು ನೀಡಲಾಗಿದೆ. 3,899 ಮಂದಿಯಿಂದ ಹಣ ಹೂಡಿಕೆ ಮಾಡಿದ್ದಾರೆ ಎನ್ನಲಾಗಿತ್ತು.